ರಾಯಚೂರು ಜನವರಿ 30 (ಕರ್ನಾಟಕ ವಾರ್ತೆ): ದೇವದುರ್ಗ, ಸಿರವಾರ, ಮಾನವಿ, ಸಿಂಧನೂರ ಮತ್ತು ಲಿಂಗಸೂರ ತಾಲೂಕು ಸೇರಿದಂತೆ ಜಿಲ್ಲೆಯ ಯಾವುದೇ ಕಡೆಗಳಲ್ಲಿ ಅನಧೀಕೃತವಾಗಿ ಮರಳು ಸಾಗಣೆ ಕೂಡಲೇ ನಿಲ್ಲಬೇಕು. ಯಾವುದೇ ಕಡೆಗಳಲ್ಲಿ ರಾಜಾರೋಷವಾಗಿ ಮರಳು ಎತ್ತುವುದು ಕಂಡು ಬಂದಲ್ಲಿ ಅದನ್ನು ಸಹಿಸಲಾಗುವುದಿಲ್ಲ. ಅವರು ಎಷ್ಟೇ ಪ್ರಭಾವಿಗಳಾಗಿರಲಿ, ಯಾರೇ ಇರಲಿ ಅಂತವರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಜಿಲ್ಲಾ ಟಾಸ್ಕ್ಪೋರ್ಸ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಕಡಕ್ ಎಚ್ಚರಿಕೆ ನೀಡಿದರು.
ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 30ರಂದು ನಡೆದ ಜಿಲ್ಲಾ ಟಾಸ್ಕ್ಪೋರ್ಸ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಸಮಿತಿಯ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ರಾಯಚೂರು ಜಿಲ್ಲೆಯ ದೇವದುರ್ಗ, ಮಾನವಿ ಸೇರಿದಂತೆ ಇನ್ನೀತರ ಕಡೆ ಅನಧೀಕೃತ ಮರಳು ಸಾಗಣೆ ಅವ್ಯಾಹತ ನಡೆಯುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಅಧಿಕಾರಿಗಳು ಕ್ರಮ ವಹಿಸಬೇಕು ಎನ್ನುವ ವಿಷಯವು ಕೆಡಿಪಿ ಸಭೆ ಮತ್ತು ಇನ್ನಿತರ ಸಭೆಗಳಲ್ಲಿ ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಈ ವಿಷಯವನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ. ಈ ಲ್ಯಾಂಡ್ ಮಾಫಿಯಾದಲ್ಲಿ ಯಾವುದೇ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಕೂಡದು. ಈ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿ, ಅಧಿಕಾರಿಗಳು ಮತ್ತು ಸಿಬ್ಬಂದಿಯು ನೋಡಿಯೂ ನೋಡದಂತೆ ಇದ್ದರೆ, ಅಕ್ರಮ ಮರಳು ದಂಧೆಗೆ ಕುಮ್ಮಕ್ಕು ನೀಡಿದರೆ ಸಹಾಯಕ ಆಯುಕ್ತರು, ಪೊಲೀಸ್ ಉಪಾಧೀಕ್ಷಕರು, ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪಿಡಿಓ ಯಾರೇ ಇರಲಿ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲು ಕೂಡಲೇ ಶಿಪಾರಸ್ಸು ಮಾಡಲಾಗುವುದು. ಪ್ರಕರಣವು ಗಂಭೀರವಾಗಿದ್ದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆಯೇ ಎಫ್‌ಐಆರ್ ದಾಖಲಿಸಿ ಶಾಶ್ವತವಾಗಿ ಮನೆಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಶೇಷ ಕಾರ್ಯಾಚರಣೆಗೆ ಸೂಚನೆ: ಅಕ್ರಮ ಮರಳು ಸಾಗಣೆಗೆ ಬ್ರೇಕ್ ಹಾಕಬೇಕು ಎಂಬುದು ದೇವದುರ್ಗ ಸಿಟಿ ಜನರು ಹಾಗೂ ಆ ತಾಲೂಕಿನ 48 ಹಳ್ಳಿಗಳ ಒಕ್ಕೋರಲಿನ ಮನವಿ ಮತ್ತು ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ದೇವದುರ್ಗ ತಾಲೂಕಿನಲ್ಲಿ ವಾರಗಳ ಕಾಲ ವಿಶೇಷ ಕಾರ್ಯಾಚರಣೆಗಿಳಿಯಬೇಕು. ದೇವದುರ್ಗ ಮತ್ತು ಮಾನವಿಯಲ್ಲಿ ಆರ್‌ಟಿಓ ಅಧಿಕಾರಿಗಳು ವಿಶೇಷ ಡ್ರೆöÊವ್ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪೊಲೀಸ್ ರಕ್ಷಣೆಗೆ ಪಡೆದುಕೊಳ್ಳಿ: ನೇಮ್ ಪ್ಲೇಟ್ ಇಲ್ಲದೇ ಮಣ್ಣು ತುಂಬಿಕೊಂಡು ಓಡಾಡುವ ಟಿಪ್ಪರ್, ಟ್ರಾಕ್ಟರ್‌ಗಳ ಮೇಲೆ ಕಣ್ಣಿಟ್ಟು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ದಾಳಿ ನಡೆಸಿ ಅಂತಹ ವಾಹನಗಳನ್ನು ಸೀಜ್ ಮಾಡಬೇಕು. ಹೇವಿ ಪೆನಾಲ್ಟಿ ಹಾಕಿ ಬಿಸಿ ಮುಟ್ಟಿಸಬೇಕು, ಸೀಜ್ ಮಾಡಿ ಸುಮ್ಮನೆ ಬಿಡಬಾರದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಚೆಕ್‌ಪೋಸ್ಟ್ ಸ್ಥಾಪನೆಗೆ ಸೂಚನೆ: ಜಾಲಹಳ್ಳಿ, ಗಬ್ಬೂರ ಸೇರಿದಂತೆ ದೇವದುರ್ಗ, ಸಿರವಾರ, ಲಿಂಗಸೂರು, ಮಾನವಿ, ಸಿಂಧನೂರ ತಾಲೂಕಿನ ವಿವಿಧೆಡೆ ಕೂಡಲೇ ಚೆಕ್‌ಪೋಸ್ಟ್ ಸ್ಥಾಪನೆಗೆ ಕ್ರಮವಹಿಸಿ ಅಕ್ರಮ ಮರಳು ಸಾಗಣೆ ತಡೆಯಬೇಕು. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಸೇರಿ ಒಟ್ಟು ಮೂರು ತಂಡಗಳಾಗಿ ಚೆಕ್‌ಪೋಸ್ಟನಲ್ಲಿ ನಿಗಾ ಇಡಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಲೇ ಯಾವುದೇ ಮೇಸೇಜ್ ಪಾಸಾಗದಂತೆ ಜಾಗರೂಕರೆವಹಿಸಿ ಬೇರೆ ಬೇರೆ ಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಚೆಕ್‌ಪೋಸ್ಟಗಳಿಗೆ ನಿಯೋಜನೆ ಮಾಡಬೇಕು. ಬೇರೆ ಬೇರೆ ಇಲಾಖೆಗಳಲ್ಲಿನ ಎಫ್‌ಡಿಎ, ಎಸ್‌ಡಿಎ ಸೇರಿದಂತೆ ಇನ್ನೀತರ ಸಿಬ್ಬಂದಿಯನ್ನು ಕಾರ್ಯಾಚರಣೆ ನಡೆಸುವ ಸಮಿತಿಗೆ ಸೇರಿಸಿಕೊಂಡು ಅವರಿಗೆ ಜವಾಬ್ದಾರಿ ಹಂಚಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಿಸಿ ಟಿವಿ ಅಳವಡಿಕೆಗೆ ಸೂಚನೆ: ಬೇರೆ ಬೇರೆ ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸಿ ಅವರು ಕಾರ್ಯ ನಿರ್ವಹಿಸುವಂತೆ ನೋಡಿ ನಿಗಾ ವಹಿಸಬೇಕು. ಸಿಟಿ ಟಿವಿ ರೆಕಾರ್ಡ್ ಇಟ್ಟುಕೊಳ್ಳಬೇಕು. ಸಿಸಿಟಿವಿ ಅಳವಡಿಸಿಲ್ಲ ಎಂದು ಯಾವುದೇ ಕಾರಣಕ್ಕೂ ಸಬೂಬು ಹೇಳುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸೀಜ್ ಮಾಡಿದ ಸ್ಯಾಂಡ್ ವಿಲೆಗೆ ಸೂಚನೆ: ಜಿಲ್ಲೆಯಲ್ಲಿ ಕೆಕೆಆರ್‌ಡಿಬಿಯಿಂದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಜಲಧಾರೆಯ ದೊಡ್ಡ ಪ್ರೊಜೆಕ್ಟ್ ಅನುಷ್ಠಾನವಾಗುತ್ತಿದೆ. ನಿರ್ಮಿತಿ ಕೇಂದ್ರದಿಂದಲೂ ಕೆಲವು ಕಾಮಗಾರಿಗಳು ಚಾಲ್ತಿಯಲ್ಲಿವೆ. ಇಂತಹ ಕಾಮಗಾರಿಗಳಿಗೆ ಮಣ್ಣು ಬೇಕಾಗುತ್ತದೆ. ಇದುವೆರೆಗೆ ಜಪ್ತಿ ಮಾಡಿದ ಮಣ್ದಿಗೆ ನಿಯಮಾನುಸಾರ ಇ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಆಯುಕ್ತರು, ತಹಸೀಲ್ದಾರಗೆ ಸೂಚನೆ: ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರು ಅಕ್ರಮ ಮರಳು ಸಾಗಣೆ ಪ್ರಕರಣಗಳ ಬಗ್ಗೆ ವಿಶೇಷ ನಿಗಾವಹಿಸಬೇಕು. ತಮ್ಮ ಹಂತದಲ್ಲಿ ತಂಡಗಳನ್ನು ರಚಿಸಿಕೊಂಡು ಆಯಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯಾವ ಕಡೆಗೆ ಎಷ್ಟು ದಾಳಿ ಮಾಡಿದ್ದೀರಿ ಎಂಬುದರ ಬಗ್ಗೆ ಟಾರ್ಗೆಟ್ ನೀಡಬೇಕು. ತಮ್ಮ ಹಂತದಲ್ಲಿ ದಾಳಿ ನಡೆಸಿ ಜೆಸಿಬಿ, ಟಿಪ್ಪರ್, ಟ್ರಾಕ್ಟರ್ ಸೀಜ್ ಮಾಡಿ ಬಿಸಿಮುಟ್ಟಿಸಬೇಕು ಎಂದು ಸೂಚನೆ ನೀಡಿದರು.
ಆರ್‌ಟಿಓ ಅಧಿಕಾರಿಗಳಿಗೆ ಸೂಚನೆ:
ತಂಡವಾಗಿ ಕೆಲಸ ಮಾಡಿ: ಪೊಲೀಸ್ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು. ರಾತ್ರಿ 9 ಗಂಟೆಯಿಂದ ಬೆಳಗಿನ 7 ಗಂಟೆವರೆಗಿನ ಅವಧಿಯಲ್ಲಿ ವಿಶೇಷ ನಿಗಾವಹಿಸಬೇಕು. ಒಂದೇ ವಾಹನಕ್ಕೆ ಅನುಮತಿ ಪಡೆದು ಒಂದೇ ನೇಮ್ ಪ್ಲೇಟ್ ಮೇಲೆ ನಾಲ್ಕಾರು ಗಾಡಿ ಓಡಿಸುವ ಜಾಲದ ಬಗ್ಗೆ ಗಮನ ಹರಿಸಬೇಕು ಎಂದು ಇದೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೂರುಗಳ ದಾಖಲಿಸಿ: ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ ಅವರು ಮಾತನಾಡಿ, ಉಪಖನಿಜ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಜಿಲ್ಲೆಯಲ್ಲಿ ಹಲವಾರು ವಾಹನಗಳಿಗೆ ಪರವಾನಿಗೆ ಇಲ್ಲದೇ, ನಂಬರ್ ಪ್ಲೇಟ್ ಇಲ್ಲದೇ ಹಾಗೂ ಜಿಪಿಎಸ್ ನೋಂದಣಿ ಇಲ್ಲದೇ ಅನಧೀಕೃತವಾಗಿ ಉಪ ಖನಿಜ ಸಾಗಣೆ ಮಾಡುವ ಬಗ್ಗೆ ದೂರುಗಳನ್ನು ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿ, ಡಾ.ಹಂಪಣ್ಣ ಸಜ್ಜನ, ದೇವದುರ್ಗ, ಲಿಂಗಸೂರು, ಅರಕೇರಾ, ಸಿರವಾರ, ಮಸ್ಕಿ, ಸಿಂಧನೂರ ಮತ್ತು ಮಾನ್ವಿ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಮುತ್ತಣ್ಣ ಅವರು ಸಭೆಗೆ ಇಲಾಖೆಯ ಗುರಿ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *