ರಾಯಚೂರು ಜನವರಿ 30 (ಕರ್ನಾಟಕ ವಾರ್ತೆ): ದೇಶದಲ್ಲಿ ಪ್ರತಿನಿತ್ಯ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಜಾಗೃತಿ ಹೊಂದುವ ಅಗತ್ಯವಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಬಾಗಡೆ ಅವರು ಹೇಳಿದರು.
ಜನವರಿ 30ರ ಶುಕ್ರವಾರ ದಂದು ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾವಾದಿಗಳ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ರೋಟರಿ ಕ್ಲಬ್, ರೊಟರಿ ಕ್ಲಬ್ ಕೃಷ್ಣ ತುಂಗೆ ಮತ್ತು ಮಾನವ ಹಕ್ಕುಗಳು ಹಾಗೂ ಭ್ರಷ್ಟಚಾರ ವಿರೋಧಿ ಸಂಸ್ಥೆ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಕಷ್ಟು ಮಂದಿಗೆ ಅರಿವಿನ ಅಗತ್ಯವಿದ್ದು, ಹೆಲ್ಮೆಟ್ ರಹಿತ ಹಾಗೂ ಕುಡಿದ ಮತ್ತಿನಲ್ಲಿ ವಾಹನ ಚಾಲನೆ, ಮೊಬೈಲ್ ಫೋನ್ ಬಳಕೆ, ಅತೀವೇಗದಿಂದ ಚಾಲನೆ ಮಾಡುವುದರಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ. ಇವುಗಳ ನಿಯಂತ್ರಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಯುವಕರು, ಚಿಕ್ಕ ಮಕ್ಕಳು ಅತ್ಯಂತ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಆಕಸ್ಮಿಕ ಅಪಘಾತಗಳು ನಡೆಯುತ್ತವೆ. ಇದರಿಂದ ಜೀವ ಹಾನಿಯಾಗುತ್ತದೆ ಎಂದರು.
ದ್ವಿಚಕ್ರ ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ನ್ಯಾಯಾಲಯದಲ್ಲಿ ಬರುವ ಅಪಘಾತ ಪ್ರಕರಣಗಳಲ್ಲಿ ಹೆಚ್ಚಾಗಿ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದವು ಅಥವಾ ಅಂಗಾಂಗಗಳನ್ನು ಕಳೆದುಕೊಂಡ ಪ್ರಕರಣಗಳಾಗಿರುತ್ತವೆ. ಒಂದು ಸಾವಿರ ರೂ. ಹಣದ ಬಗ್ಗೆ ಯೋಚಿಸದೇ ಕೂಡಲೇ ಹೆಲ್ಮೆಟ್ ಖರೀದಿಸಿ ಬಳಸಿದಲ್ಲಿ ಅತ್ಯಮೂಲ್ಯವಾದ ಈ ಜೀವನ ಉಳಿಯುತ್ತದೆ. ದ್ದರಿಂದ ಜನರು ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕೆಂದರು.
ಈ ವೇಳೆ ಕೃಷ್ಣ ತುಂಗೆ ರೋಟರಿ ಕ್ಲಬ್ ಅಧ್ಯಕ್ಷರಾದ ಪವನ ಕುಮಾರ್ ಕಿಶೋರ್ ಪಾಟೀಲ ಅವರು ಮಾತನಾಡಿ, ಹೆಲ್ಮೆಟ್ ಧರಿಸಿದೇ ವಾಹನ ಚಾಲನೆ ಮಾಡಿದಲ್ಲಿ ತಮ್ಮ ಜೀವನದ ಜೊತೆಗೆ ಕುಟುಂಬವನ್ನು ಅನಾಹುತಗಳಿಗೆ ತಳ್ಳಿದಂತಾಗುತ್ತದೆ ಎನ್ನುವ ತಿಳಿವಳಿಕೆ ಹೊಂದಬೇಕು ಎಂದರು.
ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾತನಾಡಿ, ಬಿಸಿಲಿನ ಕಾರಣಕ್ಕೆ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವ ಜನರು ಒಂದು ಅಂಶವನ್ನು ತಿಳಿದುಕೊಳ್ಳಬೇಕು. ಜೀವಕ್ಕಿಂತ ಬಿಸಿಲು ಅಷ್ಟೇನು ಮುಖ್ಯವಲ್ಲ. ಹೆಲ್ಮೆಟ್ ಧರಿಸುವ ಮೂಲಕ ಜೀವ ರಕ್ಷಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಗೌರವಾನ್ವಿತ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಡಿ.ಮಹಾವರಕರ್, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹತ್ತಿಕಾಳ್ ಪ್ರಭು ಸಿದ್ದಪ್ಪ, ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಸಿದ್ದರಾಮಪ್ಪ ಕಲ್ಯಾಣರಾವ್, ಅಪರ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಸುಧೀನ್ ಕುಮಾರ್ ಡಿ.ಜೆ., 2ನೇ ಹೆಚ್ಚುವರಿ ಹಿರಿಯ ಶ್ರೇಣಿ ವ್ಯವಹಾರ ನ್ಯಾಯಾಧೀಶರಾದ ಶ್ರೀಮತಿ ಶ್ವೇತಾ ಸಿಂಗ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್, 3ನೇ ಅಪರ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಶ್ರೀಮತಿ ಕೃಪಾ ಸಿ.ಎಲ್., ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ಚನ್ನಬಸಪ್ಪ ಆರ್.ಕೂಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳಾದ ಗುರುನಾಥ ರೆಡ್ಡಿ, ವಕೀಲರಾದ ಶಿವಶಂಕರ್, ಕೃಷ್ಣ ತುಂಗೆ ರೋಟರಿ ಕ್ಲಬ್‌ನ ಸದಸ್ಯರಾದ ಸಂಪತ್ತು ಕುಮಾರ್, ತಿರುಮಲ್ಲ ರೆಡ್ಡಿ, ಕೇಶರಾವ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *