ರಾಯಚೂರು ಜನವರಿ 28 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಜನವರಿ 28ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ ನಡೆಯಿತು.
ಆಸ್ಪತ್ರೆಯಲ್ಲಿ ಜನನವಾದ ಹೆಣ್ಣು ಮಕ್ಕಳಿಗೆ ಹೊಸ ಉಡುಪು ಹಾಗೂ ಸಿಹಿ ಪದಾರ್ಥ ತಾಯಂದಿರಿಗೆ ವಿತರಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು, ಪ್ರಸ್ತುತ ದಿನಗಳಲ್ಲಿ ಹೆರಿಗೆಯು ಕುಟುಂಬದ ಆರ್ಥಿಕ ತೊಂದರೆಗೆ ಕಾರಣವಾಗುತ್ತಿದೆ ಎಂಬ ನಂಬಿಕೆಯನ್ನು ದೂರಮಾಡಲು ಮತ್ತು ಮಗುವಿನ ಜನನದ ನಂತರ ಹೆಣ್ಣು ಗಂಡು ಎಂಬ ಭೇದ ತೊಲಗಿಸಲು ಮಹಿಳೆಯ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರಕಾರವು ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಪರಿಕರಗಳು, ತಜ್ಞವೈದ್ಯರ ನೇಮಕದೊಂದಿಗೆ ತಾಯಿ ಮಕ್ಕಳ ಆಸ್ಪತ್ರೆಗಳನ್ನು ಜಿಲ್ಲೆಯ ರಾಯಚೂರು, ಮಾನ್ವಿ, ಸಿಂಧನೂರುಗಳಲ್ಲಿ ಜನಪ್ರತಿನಿಧಿಗಳ ಬೆಂಬಲ, ಜಿಲ್ಲಾಡಳಿತ ಮಾರ್ಗದರ್ಶನದಡಿ ಈಗಾಗಲೇ ಆರಂಭಿಸಲಾಗಿದೆ. ಹೆರಿಗೆಗೆ ಆಗಮಿಸುವ ಗರ್ಭಿಣಿಯು ‘ಜನನಿ ಶಿಶು ಸುರಕ್ಷಾ ಯೋಜನೆ’, ಸುಮನ್, ಲಕ್ಷ್ಯ ಕಾರ್ಯಕ್ರಮಗಳಡಿ ಸುರಕ್ಷಿತ ಹೆರಿಗೆಯೊಂದಿಗೆ ಸಂತಸದಿಂದ ನಗುಮಗು ವಾಹನದಲ್ಲಿ ಮನೆಗೆ ಮರಳುವ ಸುಂದರ ಕ್ಷಣಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಇದು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಗು ದಿನದ ಸಂದರ್ಭದಲ್ಲಿ ತಾಯಿ ಮರಣಗಳ ತಡೆಯುವ ಜೊತೆಗೆ ಹೆಣ್ಣಿನ ಸುರಕ್ಷತೆಗೆ ಸರಕಾರದ ದಿಟ್ಟ ಹೆಜ್ಜೆಯಾಗಿದೆ. ಅಲ್ಲದೆ ಸರಕಾರದ ಯೋಜನೆಗಳ ಸದುಪಯೋಗ ಮಾಡಿಸುವ ಜೊತೆ ಜೊತೆಗೆ ಹೆಣ್ಣು ಮಗುವಿನ ಉನ್ನತ ಗುರಿ, ಸಾಧನೆಗೆ ಸಾಕ್ಷಿಯಾಗೋಣ ಎಂದು ತಿಳಿಸಿದರು.
ಕುಟುಂಬದಲ್ಲಿ ಹೆಣ್ಣು ಎಂಬ ಭೇದ ಮಾಡದೆ ಮಗಳಿಗೆ ಆರೋಗ್ಯ ಇಲಾಖೆಯಡಿ ಬಾಲ್ಯದಲ್ಲಿಯೇ ಸಂಫೂರ್ಣ ಲಸಿಕೆ, ಹದಿಹರೆಯದಲ್ಲಿ ರಕ್ತಹೀನತೆಯ ವಿಷಚಕ್ರ ಅಳಿಸಲು ‘ಅನಿಮೀಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯಡಿ ಕಬ್ಬಿಣಾಂಶ ಮಾತ್ರೆಗಳ ಒದಗಿಸುವಿಕೆ, ವೈಯಕ್ತಿಕ ಆರೋಗ್ಯಕ್ಕಾಗಿ ಶುಚಿ ನ್ಯಾಪ್‌ಕಿನ್‌ಗಳ ಪೂರೈಕೆ, ಸ್ನೇಹ ಕ್ಲಿನಿಕ್ ಮೂಲಕ ಹದಿಹರೆಯದ ಸಮಸ್ಯೆಗಳಿಗೆ ಸ್ಪಂದನೆ, ಮದುವೆಯನ್ನು 18 ವರ್ಷ ತುಂಬಿದ ನಂತರ, 20 ವರ್ಷಗಳ ನಂತರ ಗರ್ಭವತಿಯಾಗುವಿಕೆಯ ಮಹತ್ವ ಕುರಿತು ಜಾಗೃತಿ ನೀಡಲಾಗುತ್ತಿದೆ ಎಂದರು.
ಹೆಣ್ಣು ಭ್ರೂಣ ಹತ್ಯೆ ತಡೆಗೆ ನಿರಂತರ ನಿಗಾವಣೆ: ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಸ್ಕ್ಯಾನಿಂಗ್ ಸೆಂಟರ್‌ಗಳ ನಿಗಾವಣೆಯೊಂದಿಗೆ, ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯು ನಿರಂತರ ಜಾಗೃತಿ ಮೂಲಕ, ಪುರುಷ, ಸ್ತ್ರೀ ಅನುಪಾತದ ಸಮ ಪ್ರಮಾಣಕ್ಕಾಗಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ 1994ಕ್ಕೆ ಬಲ ತುಂಬಿದ್ದು, ಭ್ರೂಣ ಹತ್ಯೆ ತಡೆಗೆ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಭ್ರೂಣ ಲಿಂಗ ಪತ್ತೆಗೆ ಮುಂದಾದವರ ಬಗ್ಗೆ ಮಾಹಿತಿ ಕೊಟ್ಟವರಿಗೆ ನೀಡುವ ಬಹುಮಾನವನ್ನು ರೂ 50 ಸಾವಿರದಿಂದ ರೂ 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಎನ್‌ಪೋರ್ಸಮೆಂಟ್ ಅಧಿಕಾರಿ ಡಾ.ಶಿವಕುಮಾರ ನಾರಾ, ತಾಲೂಕ ಆರೋಗ್ಯಾಧಿಕಾರಿ ಡಾ ಅಮೃತ ಹುಕ್ಕೇರಿ, ಎಮ್‌ಸಿಹೆಚ್ ಆಡಳಿತ ವೈದ್ಯಾಧಿಕಾರಿ ಡಾ ಪ್ರಜ್ವಲ್‌ಕುಮಾರ್, ಪ್ರಸೂತಿ ತಜ್ಞೆ ಡಾ.ಶಾಲಿನಿ, ಅರವಳಿಕೆ ತಜ್ಞ ಡಾ ಸರ್ಫರಾಜ್ ಖಾಜಿ, ಮಕ್ಕಳ ತಜ್ಞ ಡಾ ಮೋಹಿಜಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸ್ಸಯ್ಯ, ಮುಖ್ಯ ಶುಶ್ರೂಷಣಾಧಿಕಾರಿ ಸಲೋಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ, ನಾಗರಾಜ್, ಹಿರಿಯ ಹೆಚ್‌ಐಓ ಸುರೇಶ, ಹಿರಿಯ ಪಿಹೆಚ್‌ಸಿಓ ಈರಮ್ಮ, ಪಿ.ಸಿ.ಪಿ.ಎನ್.ಡಿ.ಟಿ.ಯ ಅಮರೇಶ ಗಡ್ಡಿ, ಎಮ್‌ಟಿಎಸ್ ಸಂಧ್ಯಾ, ಎಫ್‌ಡಿಎ ರಾಘವೇಂದ್ರ, ಫಾರ್ಮಾಸಿ ಅಧಿಕಾರಿ ಖಾಜಾಪಾಶಾ, ಲೆಕ್ಕಪರಿಶೋಧಕ ತಿಮ್ಮರಾಜು ಸೇರಿದಂತೆ ತಾಯಂದಿರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *