ರಾಯಚೂರು ಜನವರಿ 28 (ಕರ್ನಾಟಕ ವಾರ್ತೆ): ಬಹುವರ್ಷಗಳ ನಂತರ ರಾಯಚೂರು ಜಿಲ್ಲೆಯಲ್ಲಿ ಫೆ.5, ಫೆ.6 ಮತ್ತು ಫೆ.7ರಂದು ಮೂರು ದಿನಗಳ ಕಾಲ ನಿಗದಿಯಾದ ರಾಯಚೂರು ಜಿಲ್ಲಾ ಉತ್ಸವ ಯಶಸ್ಸಿಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ನ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು. ಉತ್ಸವದ ಬಗ್ಗೆ ಎಲ್ಲೆಡೆ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜನವರಿ 28ರಂದು ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲಾ ಉತ್ಸವದ ಹಿನ್ನೆಲೆಯಲ್ಲಿ ಫೆ.2 ಮತ್ತು ಫೆ.3 ರಂದು ಮಕ್ಕಳ ಹಬ್ಬ ಸಹ ಜರುಗಲಿದೆ. ಈ ಎಲ್ಲ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೂ ಮಾಹಿತಿ ರವಾನೆಯಾಗಬೇಕು. ಈ ದಿಶೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಎಲ್ಲ ಪಿಡಿಓ ಅವರು ತಮ್ಮ ತಮ್ಮ ಹಂತದಲ್ಲಿ ಸಭೆ ನಡೆಸಿ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಎಲ್ಲ ಗ್ರಾಮಗಳು, ಹೋಬಳಿಗಳು ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳ ಪ್ರಮುಖ ಸ್ಥಳದಲ್ಲಿ ಉತ್ಸವದ ಮಾಹಿತಿಯ ಬ್ಯಾನರನ್ನು ಅಳವಡಿಸುವ ಕಾರ್ಯವನ್ನು ಅತೀ ತುರ್ತಾಗಿ ಮಾಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಎಲ್ಲರೂ ಒಗ್ಗೂಡಿ ಉತ್ಸವವನ್ನು ಯಶಸ್ಸುಗೊಳಿಸಬೇಕು. ಉತ್ಸವದಲ್ಲಿ ಲೀಡ್ ಬ್ಯಾಂಕ್ ಸಹಕಾರದಲ್ಲಿ ಸ್ಟಾಲ್ ಸ್ಥಾಪಿಸಿ, ಕೇಂದ್ರ ಸರ್ಕಾರದ ಪಿಎಂಎಸ್ಬಿವೈ, ಪಿಎಂಜೆಜೆವೈ ವಿಮೆ ನೋಂದಣಿ ಮಾಡಲಾಗುವುದು. ಮುಖ್ಯವಾಗಿ ನಿರುದ್ಯೋಗಿ ಯುವಕರನ್ನು ನೋಂದಣಿ ಮಾಡುವ ಮೂಲಕ ಉದ್ಯೋಗ ಮೇಳ ಯಶಸ್ವಿಗೊಳಿಸಬೇಕು. ಪ್ರತಿ ತಾಲೂಕಿನಿಂದ ಪಂಚ ಗ್ಯಾರಂಟಿಗಳ ತಲಾ ಒಂದು ಯೋಜನೆಯ 25-30 ಫಲಾನುಭವಿಗಳನ್ನು ಕರೆ ತರಬೇಕು. ಸ್ವ ಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಟಾಲ್ ವ್ಯವಸ್ಥೆ ಕಲ್ಪಿಸಲಾಗುವುದು. ಆಹಾರ ಮೇಳ, ಗೃಹ ಉತ್ಪನ್ನಗಳ ಮಾರಾಟಕ್ಕೆ ವಿವಿಧ ಜಿಲ್ಲೆಗಳು, ಅಂತರ ರಾಜ್ಯಗಳಿಂದ ವ್ಯಾಪಾರಸ್ಥರು ಆಗಮಿಸಲಿದ್ದಾರೆ ಎಂದು ಸಿಇಓ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ್, ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

