ರಾಯಚೂರು ಜನವರಿ 27 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಪಾಲಿಕೆಯ ಕೋರ್ಟ್ ಹಾಲನಲ್ಲಿ ಜನವರಿ 27ರಂದು ನಡೆದ ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ರಾಯಚೂರು ಜಿಲ್ಲಾ ಉತ್ಸವವು ಫೆ.5 ರಿಂದ ಫೆ.7ರವರೆಗೆ ನಡೆಯಲಿದೆ. ಉತ್ಸವದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಜನತೆಗೆ ತಿಳಿಸಿ ಜಾಗೃತಿ ಮೂಡಿಸಲು ಫೆ.1ರಂದು ಹಮ್ಮಿಕೊಂಡ ಜ್ಯೋತಿ ರಥಯಾತ್ರೆಯು ರಾಯಚೂರು ಸಿಟಿಯಿಂದ ಹೊರಟು ರಾಯಚೂರು ಜಿಲ್ಲೆಯಾದ್ಯಂತ ವಿವಿಧೆಡೆ ಸಂಚರಿಸಲಿದೆ ಎಂದು ತಿಳಿಸಿದರು.
ಈ ಜ್ಯೋತಿ ರಥಯಾತ್ರೆಯ ಚಾಲನಾ ಕಾರ್ಯಕ್ರಮವು ಫೆ.1ರಂದು ಬೆಳಗ್ಗೆ 10.30ಕ್ಕೆ ರಾಯಚೂರು ಸಿಟಿಯ ಹೃದಯ ಭಾಗದಲ್ಲಿನ ಐತಿಹಾಸಿಕ ಕರ್ನಾಟಕ ಸಂಘದ ಆವರಣದಿಂದ ಹೊರಡುವುದು. ಈ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಮ್ಮೆಲ್ಲರ ನೆಚ್ಚಿನ ಐತಿಹಾಸಿಕ ಕರ್ನಾಟಕ ಸಂಘದ ಆವರಣವನ್ನು ಹಬ್ಬದ ರೀತಿಯಲ್ಲಿ ಸಿದ್ಧಪಡಿಸಿ ಅಲಂಕಾರಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯಚೂರು ಜಿಲ್ಲಾ ಉತ್ಸವದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ನಮ್ಮ ಕಲೆ, ಸಂಸ್ಕೃತಿ, ಕನ್ನಡ ನಾಡು ನುಡಿಯ ಬಗ್ಗೆ ಅರಿವು ಮೂಡಿಸುವ ದಿಶೆಯಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಲು ಸಾರ್ವಜನಿಕ ಶಿಕ್ಷಣ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಜ್ಯೋತಿ ರಥಯಾತ್ರೆ ಚಾಲನಾ ಕಾರ್ಯಕ್ರಮಕ್ಕೆ ಪ್ರತಿ ವಸತಿ ನಿಲಯಗಳಿಂದ ಇಂತಿಷ್ಟು ವಿದ್ಯಾರ್ಥಿಗಳನ್ನು ಕರೆ ತರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಗುರಿ ನೀಡಲಾಯಿತು. ನಮ್ಮ ನಮ್ಮ ಇಲಾಖೆಯ ತಾಲೂಕು ಅಧಿಕಾರಿಗಳಿಗೆ, ಆಯಾ ಹಾಸ್ಟೇಲ್ ವಾರ್ಡನಗಳಿಗೆ ಜವಾಬ್ದಾರಿ ವಹಿಸಿ ಹಾಸ್ಟೇಲ್ ವಿದ್ಯಾರ್ಥಿಗಳನ್ನು ಸೇರಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಒಂದೇ ಬಗೆಯ ಸೀರೆಯೊಂದಿಗೆ, ಶಿಸ್ತುಬದ್ಧವಾಗಿ ಜ್ಯೋತಿ ರಥಯಾತ್ರೆ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಏರ್ಪಾಡು ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಯಿತು.
ರಾಯಚೂರು ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಹಸೀಲ್ದಾರರು, ಜಿಲ್ಲೆಯ ಎಲ್ಲಾ ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಆರಕ್ಷಕ ಉಪ ನಿರೀಕ್ಷಕರು, ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಸಮಿತಿಯ ಸದಸ್ಯರಾಗಿದ್ದು ಈ ಬಗ್ಗೆ ಗಮನ ಹರಿಸಿ ಜ್ಯೋತಿ ರಥಯಾತ್ರೆಯು ಎಲ್ಲಾ ಕಡೆಗಳಲ್ಲಿ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜ್ಯೋತಿ ರಥಯಾತ್ರೆ ಸಮಿತಿಯ ಅಧ್ಯಕ್ಷರಾದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧೂ, ಡಿವೈಎಸ್ಪಿ ಶಾಂತವೀರ, ಸಮಿತಿಯ ಸದಸ್ಯ ಕಾರ್ಯದರ್ಶಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ ಸೇರಿದಂತೆ ಇನ್ನೀತರರು ಇದ್ದರು.

Leave a Reply

Your email address will not be published. Required fields are marked *