ಮಸ್ಕಿ,ಜ,27:- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ, ಫೆಬ್ರವರಿ 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಎಐಸಿಸಿಟಿಯು (AICCTU) ಸಂಘಟನೆ ಕರೆ ನೀಡಿದೆ.
ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಎಐಸಿಸಿಟಿಯು ಮಸ್ಕಿ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಕರಪತ್ರಗಳನ್ನು ಹಂಚುವ ಮೂಲಕ ಮುಷ್ಕರದ ಕುರಿತು ವ್ಯಾಪಕ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಅಜೀಜ್ ಜಾಗೀರ್ದಾರ್, ದುಡಿಯುವ ವರ್ಗಗಳ ಹಕ್ಕುಗಳನ್ನು ಕುಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಕಾರ್ಮಿಕರ ಬದುಕು ಮತ್ತಷ್ಟು ಅಸ್ಥಿರವಾಗುತ್ತಿದೆ ಎಂದು ಕಿಡಿಕಾರಿದರು.
ಕಾರ್ಮಿಕರ ಕಲ್ಯಾಣಕ್ಕೆ ಪೂರಕವಾಗಬೇಕಾದ ಸರ್ಕಾರಗಳು, ಉದ್ಯೋಗ ಭದ್ರತೆ ಕಿತ್ತುಕೊಳ್ಳುವಂತಹ ಕಾನೂನುಗಳನ್ನು ಜಾರಿಗೆ ತಂದು ಜನರನ್ನು ಸಂಕಷ್ಟಕ್ಕೆ ದೂಡುತ್ತಿವೆ.ಈ ಹಿನ್ನೆಲೆಯಲ್ಲಿ
ನೂತನ 4 ಕಾರ್ಮಿಕ ಸಂಹಿತೆಗಳ ಸಂಪೂರ್ಣ ರದ್ದತಿ
ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗೆ ವಿರೋಧ,
ಶಿಕ್ಷಣ ನೀತಿಯ ವಿರುದ್ಧ ಹೋರಾಟ,
ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಒತ್ತಾಯ,
ಕೆಲಸದ ಅವಧಿಯನ್ನು 12 ಗಂಟೆಗೆ ವಿಸ್ತರಿಸುವ ಆದೇಶಗಳ ವಾಪಸ್,
ಈ ಎಲ್ಲ ಕಾರ್ಮಿಕ ವಿರೋಧಿ ನಿರ್ಧಾರಗಳ ವಿರುದ್ಧ ದೇಶದಾದ್ಯಂತ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಸ್ಕಿ ತಾಲೂಕಿನಲ್ಲೂ ಈ ಮುಷ್ಕರವನ್ನು ಅತ್ಯಂತ ವ್ಯಾಪಕವಾಗಿ ನಡೆಸಲಾಗುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ದುಡಿಯುವ ವರ್ಗದ ಜನರು ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನಮಂತಪ್ಪ ವೆಂಕಟಾಪುರ್, ಲಿಂಗನಗೌಡ, ಹನುಮಂತ ನಾಯಕ್, ಮಹೆಬೂಬ್ ಏಕೋಬ, ನವೀನ್, ಫರೀದ್ ಸೇರಿದಂತೆ ಇತರ ಕಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ,,,ಸುರೇಶ ಬಳಗಾನೂರು.

