ರಾಯಚೂರು ಜನವರಿ 27 (ಕರ್ನಾಟಕ ವಾರ್ತೆ): ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಹಾತ್ಮ ಗಾಂಧೀಜಿ ಪುತ್ಥಳಿಯ ಮುಂಭಾಗದಲ್ಲಿ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮವು ಜನವರಿ 26ರಂದು ನಡೆಯಿತು.
ಈ ವೇಳೆ ಲಕ್ಷ್ಮೀದೇವಿ, ಸುನೀತಾ, ನಾಗಶ್ರೀ, ಸೈಯದ್ ಇಸ್ಮಾಯಿಲ್ ಖಾದ್ರಿ, ವಿದ್ಯಾಸಾಗರ್ ಅವರು ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗಿಯಾಗಿ ವಿವಿಧ ಧರ್ಮಗಳಲ್ಲಿನ ಅಂಶಗಳ ಕುರಿತು ಪ್ರಸ್ತುತಪಡಿಸಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಮಹಾತ್ಮಾ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದ ಮಹತ್ವ ತಿಳಿಸುವ ಭಾರತದ ಲಿಖಿತ ಸಂವಿಧಾನದ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ಯುವಕರು, ವಿದ್ಯಾರ್ಥಿಗಳು ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬೇಕು. ಕಾನೂನಿನಡಿಯಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕೆಂದರು.
ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿ ವರ್ಷದೊಳಗೆ ಪಾಲಿಕೆಯ ಆಡಳಿತವನ್ನು ಬಲಪಡಿಸುವಲ್ಲಿ ನಾವು ನಾನಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದಕ್ಕೆ ರಾಯಚೂರಿನ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಮತ್ತು ಮಾಧ್ಯಮದವರು ನೀಡಿದ ಸಹಕಾರ ಸ್ಮರಣೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಾಲಿಕೆಯ ಜೋನಲ್ ಆಯುಕ್ತರಾದ ಪುರುರಾಜ್ ಸಿಂಗ್ ಸೋಲಂಕಿ, ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ, ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರಾದ ಬಸವರಾಜ್ ಹೆಬ್ಬಾರ್, ಪರಿಸರ ಅಭಿಯಂತರರಾದ ಜಯಪಾಲ್ ರೆಡ್ಡಿ, ಎನ್.ವಿ.ಡಿ ಸ್ಪರ್ಧಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ದಂಡಪ್ಪ ಬಿರಾದಾರ, ಭಾರತ ಸೇವಾ ದೇಳದ ವಿದ್ಯಾಸಾಗರ್, ಭರತ್, ಶರಣಪ್ಪ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *