ಮದ್ಲಾಪೂರು :
ಗ್ರಾಮ ಪಂಚಾಯತ್ ಮದ್ಲಾಪೂರು ವ್ಯಾಪ್ತಿಯಲ್ಲಿ ವಿಕಸಿತ ಭಾರತ್ ಗ್ಯಾರಂಟಿ ರೋಜಗಾರ್ ಮತ್ತು ಆಜೀವಿಕ ಮಿಷನ್ ಯೋಜನೆ ಕುರಿತು ನಡೆದ ಸಭೆಯ ಸಂದರ್ಭದಲ್ಲಿ, ಜನಸೇವಾ ಫೌಂಡೇಶನ್ (ರಿ) ಸಂಘಟನೆಯ ತಾಲೂಕು ಅಧ್ಯಕ್ಷ ತಾಜುದ್ದೀನ್ ಚೀಕಲಪರ್ವಿ ಮಾತನಾಡಿ, ಕಾರ್ಮಿಕ ವಿರೋಧಿ ವಿಬಿ ಗ್ರಾಮ ಜಿ ಹೊಸ ಕಾಯ್ದೆಯನ್ನು ರದ್ದುಪಡಿಸಿ, ಮೊದಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಯನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿದರು. ನರೇಗಾ ಯೋಜನೆ ಬಡ ಕೂಲಿ ಕಾರ್ಮಿಕರ ಬದುಕಿನ ಆಧಾರವಾಗಿದ್ದು, ಇದನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳನ್ನು ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ ಎಂದು ಅವರು ಹೇಳಿದರು.
ದಿನಾಂಕ 26-01-2026 ರಂದು ಆಯೋಜಿಸಿರುವ ವಿಶೇಷ ಗ್ರಾಮಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ, ಸರ್ವಾನುಮತದಿಂದ ನರೇಗಾ ಮರುಸ್ಥಾಪನೆಗೆ ತೀರ್ಮಾನ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು. ನರೇಗಾ ಯೋಜನೆಯ ಮೂಲಕ ಕಾರ್ಮಿಕರು ವಲಸೆ ಹೋಗದೇ ತಮ್ಮದೇ ಗ್ರಾಮದಲ್ಲಿ ಜೀವನೋಪಾಯ ಸಾಗಿಸುತ್ತಿದ್ದು, ಇದನ್ನು ಕೇವಲ ಉದ್ಯೋಗವಲ್ಲ, ಕಾರ್ಮಿಕರ ಹಕ್ಕು ಎಂದು ಪರಿಗಣಿಸಬೇಕು ಎಂದು ಸಂಘಟನೆಯು ಮನವಿಯಲ್ಲಿ ತಿಳಿಸಿದೆ.
ಮನವಿಯಲ್ಲಿ ಸಂಘಟನೆ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದೆ:
ನರೇಗಾ ಯೋಜನೆಯಲ್ಲಿ ಬಾಲಕಾರ್ಮಿಕರ ಬಳಕೆಗೆ ಸಂಪೂರ್ಣ ನಿಷೇಧ, ದಿನಕ್ಕೆ ಕನಿಷ್ಠ ಒಂದು ಬಾರಿ ಎಂಎಂಎಸ್ ಮೂಲಕ ಕೂಲಿ ಪಾವತಿ, ಕೆಲಸಕ್ಕೆ ಬೇಕಾದ ಉಪಕರಣಗಳ ವೆಚ್ಚವನ್ನು ಸರ್ಕಾರವೇ ಭರಿಸುವುದು, ಕಾರ್ಮಿಕರಿಗೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಒದಗಿಸುವುದು, ಸಮಯಕ್ಕೆ ಸರಿಯಾಗಿ ಕೂಲಿ ಪಾವತಿ ಹಾಗೂ ವಿಳಂಬವಾದಲ್ಲಿ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಜನಸೇವಾ ಫೌಂಡೇಶನ್ ಉಪಾಧ್ಯಕ್ಷ ಹಸನ್ ಚೀಕಲಪರ್ವಿ, ಸಂಯುಕ್ತ ಕಾರ್ಯದರ್ಶಿ ಸಿದ್ದರೆಡ್ಡಿ ಜಾನೇಕಲ್, ಪ್ರಧಾನ ಕಾರ್ಯದರ್ಶಿ ವಾಸುದೇವ, ಹುಸೇನ್ ಬಾಷಾ ಚೀಕಲಪರ್ವಿ, ಆಜೀತ್ ಚೀಕಲಪರ್ವಿ, ಗೋಕುಲ್, ರಾಜಾಸಾಬ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

