ರಾಯಚೂರು ಜನವರಿ 27 (ಕರ್ನಾಟಕ ವಾರ್ತೆ): ಫೆ.5 ರಿಂದ ಮೂರು ದಿನಗಳ ಕಾಲ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಅಧಿಕಾರಿಗಳು ಮತ್ತು ಸಿಬ್ಬಂದಿ ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಳೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿನ ಮಹಾನಗರ ಪಾಲಿಕೆಯ ಕೋರ್ಟ ಹಾಲನಲ್ಲಿ ಜನವರಿ 27ರಂದು ನಡೆದ ರಾಯಚೂರು ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಮಂದಿರಗಳು, ಮಸೀದಿಗಳು ಹಾಗೂ ಚರ್ಚ್ ಸೇರಿದಂತೆ ಇನ್ನೀತರ ಎಲ್ಲ ದೇವಸ್ಥಾನಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಜನತೆಗೆ ಉತ್ಸವದ ಬಗ್ಗೆ ಮಾಹಿತಿ ಕೊಡುವ ಕಾರ್ಯವಾಗಬೇಕು. ರಾಯಚೂರು, ಮಾನವಿ, ಸಿಂಧನೂರ, ಲಿಂಗಸೂರು, ದೇವದುರ್ಗ, ಮಸ್ಕಿ, ಸಿರವಾರ ಸೇರಿದಂತೆ ಜಿಲ್ಲೆಯ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ಕಸ ಎತ್ತುವ ವಾಹನಗಳಲ್ಲಿ ಕಡ್ಡಾಯವಾಗಿ ಜಿಂಗಲ್ ಮೂಲಕ ಉತ್ಸವದ ಪ್ರಚಾರ ಕಾರ್ಯ ನಡೆಸಬೇಕು. ಮುಖ್ಯವಾಗಿ ತಾಲೂಕು ಪಂಚಾಯತನ ಎಲ್ಲ ಕಾರ್ಯ ನಿರ್ವಹಣಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತಗಳ ಪಿಟಿಓ ಅವರ ಸಭೆ ಕರೆದು ಅವರ ಮೂಲಕ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಸಹ ಕಸ ಎತ್ತುವ ವಾಹನಗಳು ಮತ್ತು ಡಂಗೂರದ ಮೂಲಕ ಉತ್ಸವದ ಬಗ್ಗೆ ತಿಳಿಸುವ ಕಾರ್ಯ ಮಾಡಬೇಕು. ಆಯಾ ಗ್ರಾಮಗಳಲ್ಲಿನ ಶಾಲೆಗಳ ಮುಖ್ಯ ಗುರುಗಳೊಂದಿಗೆ ಚರ್ಚಿಸಿ ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಯೋಗದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮಗಳಲ್ಲಿ ಜಾಥಾ ನಡೆಸಿ ಫೆ.5 ಹಾಗೂ ಫೆ.6 ಮತ್ತು ಫೆ.7ರಂದು ರಾಯಚೂರು ಉತ್ಸವ ನಡೆಯಲಿದೆ. ಎಲ್ಲರೂ ಭಾಗಿಯಾಗಬೇಕು ಎನ್ನುವ ಸಂದೇಶ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಂಟಿ ಸಭೆ ನಡೆಸಲು ಸೂಚನೆ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಗ್ರಾಮಗಳಲ್ಲಿ ಪ್ರತಿ ಮನೆಮನೆ ತೆರಳಿ ರಾಯಚೂರು ಉತ್ಸವದ ಬಗ್ಗೆ ಜನತೆಗೆ ತಿಳಿಸುವ ಕಾರ್ಯ ಮಾಡಬೇಕು. ಈ ನಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿ ತಮ್ಮ ಹಂತದಲ್ಲಿ ಜಂಟಿ ಸಭೆ ಅಥವಾ ವಿಡಿಯೋ ಕಾನ್ಫರೆನ್ಸ್ ನಡೆಸಿ ಉತ್ಸವದ ಪ್ರಚಾರ ಕಾರ್ಯದ ಜವಾಬ್ದಾರಿಯನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಿ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಆಟೋ ಪ್ರಚಾರ ತುರ್ತು ಆರಂಭವಾಗಲಿ: ಜಿಲ್ಲೆಯಲ್ಲಿನ ಎಲ್ಲಾ ನಗರ, ಪಟ್ಟಣ ಪ್ರದೇಶ ಮತ್ತು ಹೋಬಳಿಗಳಲ್ಲಿ ಆಟೋ ಮೂಲಕ ಪ್ರಚಾರ ಕಾರ್ಯವು ಕೂಡಲೇ ಆರಂಭವಾಗಲಿ ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಬಸ್ಸುಗಳಿಗೆ ಪೋಸ್ಟರ್ ಅಂಟಿಸಿ: ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಪ್ರಚಾರ ಕಾರ್ಯ ಚುರುಕುಗೊಳಿಸಬೇಕು. ನಗರದಲ್ಲಿ ಸಂಚರಿಸುವ ಹಾಗೂ ಬೇರೆಡೆ ಸಂಚರಿಸುವ ಎಲ್ಲ ಬಸ್ಸುಗಳಿಗೆ ಪೋಸ್ಟರ್ ಅಂಟಿಸಿ ಪ್ರಚಾರ ಕಾರ್ಯ ನಡೆಸಬೇಕು ಎಂದು ಸೂಚನೆ ನೀಡಿದರು.
ವಿವಿಧೆಡೆ ಪ್ರಚಾರ ನಡೆಸಿ: ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಂದೇಶ ಹೋಗುವ ನಿಟ್ಟಿನಲ್ಲಿ ನಗರದ ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧೆಡೆ ಬ್ಯಾನರ್ ಅಂಟಿಸಿ ಪ್ರಚಾರ ನಡೆಸಬೇಕು. ಫೆ.5 ರಿಂದ ಫೆ.7ರವರೆಗೆ ಯಾವ ಕಾರ್ಯಕ್ರಮಗಳು ಯಾವ ಸಮಯಕ್ಕೆ ನಡೆಯುತ್ತವೆ ಎಲ್ಲಿ ನಡೆಯುತ್ತವೆ ಎಂಬುದರ ಬಗ್ಗೆ ಪಟ್ಟಿ ಮಾಡಿ ಬ್ಯಾನರ್ ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಡಿಡಿಪಿಐ, ಡಿಡಿಪಿಯುಗೆ ಸೂಚನೆ: ಮುಖ್ಯವಾಗಿ ಎಲ್ಲ ಶಾಲೆಗಳ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಉತ್ಸವದ ಬಗ್ಗೆ ವ್ಯಾಪಕವಾಗಿ ಪ್ರಚಾರ ಹೋಗುವ ದಿಶೆಯಲ್ಲಿ ಡಿಡಿಪಿಐ ಮತ್ತು ಡಿಡಿಪಿಐ ಇಲಾಖೆಗಳ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಎಲ್ಲ ಶಾಲಾ ಕಾಲೇಜುಗಳಿಗೆ ಸುತ್ತೋಲೆ ಮೂಲಕ ಮಾಹಿತಿ ಕಳುಹಿಸಲು ಕೂಡಲೇ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವೆಬ್‌ಸೈಟ್ ವೀಕ್ಷಣೆ: ರಾಯಚೂರು ಉತ್ಸವ ನಿಮಿತ್ತ ಸಿದ್ಧಪಡಿಸಿದ ವೆಬ್‌ಸೈಟ್, ಇನ್‌ಸ್ಟಾಗ್ರಾಂ, ಪೇಸ್‌ಬುಕ್, ಎನ್‌ಐಸಿ ಪೇಜ್ ಸೇರಿದಂತೆ ನಾನಾ ವೆಬ್‌ತಾಣಗಳನ್ನು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿದರು. ಎಲ್ಲ ವೆಬ್‌ತಾಣಗಳು ಪ್ರತಿ ದಿನ ಅಪಡೇಟ್ ಆಗಬೇಕು. ಉತ್ಸವದ ಕಾರ್ಯಕ್ರಮಗಳ ಕುರಿತಂತೆ ಜನತೆಗೆ ಸ್ಪಷ್ಟ ಹಾಗು ನಿಖರವಾದ ಮಾಹಿತಿ ಒದಗಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದೂ, ಮಹಾನಗರ ಪಾಲಿಕೆಯು ಆಯುಕ್ತರಾದ ಜುಬಿನ್ ಮೋಹಪಾತ್ರ, ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಣ್ಣ ಬಿರಾದಾರ, ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ಇದ್ದರು.

Leave a Reply

Your email address will not be published. Required fields are marked *