ರಾಯಚೂರು ಜನವರಿ 26 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯಲ್ಲಿ ಫೆ.5 ರಿಂದ ಫೆ.7ರವರೆಗೆ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಮತ್ತೊಂದು ಹಂತದ ಸಿದ್ಧತಾ ಸಭೆಯು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜನವರಿ 26ರಂದು ನಡೆಯಿತು.
ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಆಯಾ ಸಮಿತಿಗಳಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ತಮಗೆ ವಹಿಸಿದ ಎಲ್ಲ ಕಾರ್ಯಗಳ ಬಗ್ಗೆ ಗಮನ ಹರಿಸಿ ನಿರ್ವಹಣೆ ಮಾಡಬೇಕು. ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಸಿದ್ಧತಾ ಕಾರ್ಯವನ್ನು ವೇಗಗೊಳಿಸಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯವಾಗಿ ಫೆ.5 ರಿಂದ ಫೆ.7ರವರೆಗೆ ನಡೆಯುವ ಸಾಂಸ್ಕೃತಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು ಆಗಮಿಸಿ ಕಾರ್ಯಕ್ರಮ ನೀಡುತ್ತಿರುವ ಹಿನ್ನೆಲೆಯಲ್ಲಿ ಸೇರುವ ಜನಸಂದಣಿ ನಿಯಂತ್ರಣದ ಬಗ್ಗೆ ಪೊಲೀಸ್ ಇಲಾಖೆಯು ಈಗಲೇ ರೂಪುರೇಷಗಳನ್ನು ಸಿದ್ಧಪಡಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅವಘಡಗಳು ನಡೆಯದಂತೆ ಜಿಲ್ಲಾಡಳಿತವು ಎಲ್ಲ ರೀತಿಯ ಮುಂಜಾಗ್ರಯಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಬಹುವರ್ಷಗಳ ನಂತರ ಜಿಲ್ಲೆಯಲ್ಲಿ ಉತ್ಸವ ನಿಗದಿಯಾಗಿರುವುದರಿಂದ ನಮ್ಮೆಲ್ಲರ ನಿರೀಕ್ಷೆಗೆ ತಕ್ಕಂತೆ ಜನತೆ ಸೇರುವಂತಾಗಬೇಕು. ರಾಯಚೂರು ಸಿಟಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಜನರು ಉತ್ಸವಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯ ಕಾರ್ಯಯೋಜನೆ ರೂಪಿಸಬೇಕು ಎಂದು ಸಚಿವರು ಸಲಹೆ ಮಾಡಿದರು.
ಈಗಾಗಲೇ ಶೇ.80ರಷ್ಟು ಉತ್ಸವದ ಸಿದ್ಧತೆಯ ಕಾರ್ಯ ನಡೆದಿದೆ. ಬಾಕಿ ಕಾರ್ಯವನ್ನು ಸಹ ಬೇಗನೆ ರ್ಪೂಗೊಳಿಸಲಾಗುವುದು. ಉತ್ಸವ ಹಿನ್ನೆಲೆಯಲ್ಲಿ ಬೇರೆ ಬೇರೆ ಸ್ಪರ್ಧೆಗಳು, ಕಾರ್ಯಕ್ರಮಗಳು ಪ್ರತಿ ದಿನ ನಡೆಯುತ್ತಿವೆ. ಈ ಮೂಲಕವು ಸಹ ಉತ್ಸವದ ಬಗ್ಗೆ ಜನತೆಗೆ ಮಾಹಿತಿ ಕೊಡುತ್ತಿದ್ದೇವೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ದದ್ಧಲ್, ಎ.ವಸಂತಕುಮಾರ, ಎಪಿಎಂಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಣ್ಣ ಬಿರಾದಾರ, ತಹಸೀಲ್ದಾರ ಸುರೇಶ ವರ್ಮಾ ಸೇರಿದಂತೆ ವಿವಿಧ 18 ಸಮಿತಿಗಳಲ್ಲಿನ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.


