ರಾಯಚೂರು: ನಗರದ ಪೊಲೀಸ್ ಕಾಲೋನಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ನಮ್ಮ ಶಾಲೆ ನಮ್ಮ ಹೆಮ್ಮೆ” ಕಾರ್ಯಕ್ರಮದಡಿ ಹಳೆ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಕಂಪಾಸ್ ಬಾಕ್ಸ್ ಹಾಗೂ ಪರೀಕ್ಷಾ ಪ್ಯಾಡ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ 76ನೇ ಗಣರಾಜ್ಯೋತ್ಸವವನ್ನು ಶಾಲಾ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು. ಬೆಳಿಗ್ಗೆ 7.30ಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಹೇಮಗಡ್ಡಿ ಹಾಗೂ ಶಾಲೆಯ ಮುಖ್ಯಗುರು ಈರಮ್ಮ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯರಾದ ತಾರಮ್ಮ, ನರಸಿಂಹಸ್ವಾಮಿ, ಸಹ ಶಿಕ್ಷಕರಾದ ರಾಜಶೇಖರ, ಶಂಷದಾ, ಕವಿತಾ, ಸುನಿತಾ, ಶಾಂತ, ಫೈಮಿದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಾದ ನಿಂಗಪ್ಪ, ಶಶಿಧರ ಅಂಗಡಿ, ನವೀನಕುಮಾರ, ಬಸವಲಿಂಗಮ್ಮ, ಶಿವು, ಶಾಮಸುಂದರ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

