ಮಸ್ಕಿ: ಪಟ್ಟಣದ ಸರಕಾರಿ ಕೇಂದ್ರ ಶಾಲಾ ಆವರಣದಲ್ಲಿ ತಾಲೂಕಾಡಳಿತ ಮತ್ತು ಪುರಸಭೆಯಿಂದ ೭೭ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಧ್ವಜಾರೋಹಣವನ್ನು ತಹಸೀಲ್ದಾರ್ ಮಂಜುನಾಥ ಭೋಗಾವತಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು.
ಇದಕ್ಕೂ ಮೊದಲು ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಈ ನೆಲವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾತ್ಮರು ನಡೆದಾಡಿದ ನೆಲವಾಗಿದೆ. ಭಾರತ ರಾಷ್ಟ್ರವು ಗಣರಾಜ್ಯವೆಂದು ೧೯೫೦ರ ಜನವರಿ ೨೬ರಂದು ಘೋಷಿಸಿಕೊಂಡಿತು. ಈ ದಿನವು ದೇಶದ ನಾಗರಿಕರಿಗೆ ರಾಷ್ಟ್ರದ ಜವಾಬ್ದಾರಿಯನ್ನು ನೀಡಿದ ದಿನವಾಗಿದೆ. ನಮ್ಮ ಸಂವಿಧಾನವನ್ನು ಒಪ್ಪಿಕೊಂಡ ದಿನವಿದು. ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ದಿನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಂಥಹ ಮಹಾನ್ ಮಾನವತಾವಾದಿಗಳು ರಾಷ್ಟ್ರದ ಅಭಿವೃದ್ಧಿಯ ಬಗೆಗೆ ಹಗಲಿರುಳೆನ್ನದೆ ಚಿಂತಿಸಿ ರಚಿಸಿದ ಸಂವಿಧಾನವು ಭವ್ಯಭಾರತಕ್ಕೆ ದಾರಿದೀಪವಾಗಿದೆ. ಬೇರೆ ದೇಶಗಳ ಆಡಳಿತ ಒಂದು ದಿಕ್ಕಿನಲ್ಲಿ ಸಾಗಿದರೆ ನಮ್ಮ ಭಾರತ ದೇಶ ಸಂವಿದಾನದ ಅಡಿಯಲ್ಲಿ ಸಾಗುತ್ತಿದೆ ನಮ್ಮೆಲ್ಲರ ಧರ್ಮಗ್ರಂಥ ಸಂವಿದಾನವಾಗಿದೆ ಎಂದು ಹೇಳಿದರು.
ನಂತರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ ಮಾತನಾಡಿ ದೇಶದಲ್ಲಿ ಎಲ್ಲ ಜಾತಿ ಜನಾಂಗದವರು ಶಾಂತಿಯಿಂದ ಜೀವನ ನಡೆಸುತ್ತಿರುವುದಕ್ಕೆ ಸಂವಿದಾನವೇ ಮೂಲ ಕಾರಣ. ನಾವು ಎಲ್ಲಾ ಕಾಲಘಟ್ಟದಲ್ಲಿ ಬಾಬಾ ಸಾಹೇಬ್ ಅವರನ್ನು ಪ್ರತಿನಿತ್ಯ ಸ್ಮರಿಸಬೇಕು. ವಿದ್ಯಾರ್ಥಿಗಳು ದೇಶದ ಮುಂದಿನ ಆಧಾರ, ಖಡ್ಗ ಹಿಡಿದು ಯುದ್ಧ ಮಾಡಬೇಕಾಗಿಲ್ಲ ನೀವು ಪೆನ್ನುಗಳನ್ನು ಹಿಡಿದು ಜೀವನ ರೂಪಿಸಿಕೊಳ್ಳಬೇಕು.
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಬೇಕಾಗಿದೆ. ರಾಜ್ಯ ಸರ್ಕಾರ ವಿಶೇಷವಾಗಿ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಗ್ರಾಮೀಣ ಭಾಗದ ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ವಸತಿ ಶಾಲೆಗಳನ್ನು ಆರಂಭ ಮಾಡಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರಗಳಲ್ಲಿ ಮುಂದೆ ಬಂದು ದೇಶಕ್ಕೆ ದೊಡ್ಡ ಶಕ್ತಿ ತುಂಬಬೇಕು ಎಂದರು
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ: ಯಾವುದೇ ಜಾತಿ ಜನಾಂಗ ನೋಡದೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ೨೦೦೫ರಲ್ಲಿ ನರೇಗಾ ಯೋಜನೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ಅದರೆ ಪ್ರಧಾನಿ ನರೇಂದ್ರ ಮೋದಿ ಅವರು ನರೇಗಾ ಯೋಜನೆ ತೆಗಯುವ ಹುನ್ನಾರ ನಡೆಸಿದ್ದಾರೆ. ಮಹಾತ್ಮರ ಹೆಸರನ್ನು ತೆಗೆಯುವ ದೊಡ್ಡ ಷಡ್ಯಂತ್ರ ನಡೆಸಿದೆ. ಕೇಂದ್ರಕ್ಕೆ ಬಡಜನರ ಕಾಳಜಿ ಇದ್ದರೆ ಹೊಸ ಯೋಜನೆ ಜಾರಿಗೆ ತರಲಿ ಎಂದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ: ವಿಧದ ಶಾಲೆಗಳಿಂದ ಬಂದ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿವಿದೆಡೆ ದ್ವಜಾರೋಹಣ: ಶಾಸಕರ ಕಚೇರಿಯಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ತಹಸೀಲ್ದಾರ್ ಕಚೇರಿಯಲ್ಲಿ ಮಂಜುನಾಥ್ ಭೋಗಾವತಿ, ತಾಲೂಕು ಪಂಚಾಯತಿಯಲ್ಲಿ ಅಮರೇಶ ಯಾದವ್, ಪುರಸಭೆಯಲ್ಲಿ ಸುರೇಶ ಹರಸೂರು, ನಗರಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಅಧ್ಯಕ್ಷ ಆರ್. ಸಿದ್ದನಗೌಡ ತುರ್ವಿಹಾಳ, ಕಾಂಗ್ರೆಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಪಾಟೀಲ್, ಬಿಜೆಪಿ ಕಚೇರಿಯಲ್ಲಿ ಶರಣಬಸವಸೊಪ್ಪಿಮಠ ಸೇರಿದಂತೆ ಸರಕಾರಿ ವಿವಿಧ ಇಲಾಖೆ, ಶಾಲಾ-ಕಾಲೇಜ್‌ಗಳಲ್ಲಿ ಧ್ವಜಾರೋಹಣ ನೇರವರಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಇಒ ಅಮರೇಶ್ ಯಾದವ್, ಪುರಸಭೆ ಮುಖ್ಯಾಧಿಕಾರಿ ನರಸರೆಡಿ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಸಿದ್ದನಗೌಡ ತುರ್ವಿಹಾಳ, ಮಹಿಬೂಬಸಾಬ್, ಸಿಪಿಐ ರಾಮಪ್ಪ ಜಲಗೇರಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಂಪಾಪತಿ ಹುಗಾರು, ನೀರಾವರಿ ಇಲಾಖೆಯ ದಾವೂದ್ ಸಾಬ, ಗುರುಮೂರ್ತಿ, ಅದಪ್ಪ ಸೇರಿದಂತೆ ತಾಲೂಕು ಮಟ್ಟದ ವಿವಿದ ಇಲಾಖೆಯ ಅಧಿಕಾರಿಗಳಿದ್ದರು.
ಮಸ್ಕಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ತಾಲೂಕಾಧ್ಯಕ್ಷ ಅಬ್ದುಲ್ ಅಜಿಜ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಿದ್ದರು.


