ಮಾನ್ವಿ: ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ‘ನಿತ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ’ದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಜರುಗಿತು. ಕಾರ್ಯಕ್ರಮವನ್ನು ಸೈಯದ್ ಖಾಲಿದ್ ಖಾದ್ರಿ ಅವರು ಉದ್ಘಾಟಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಖಾದ್ರಿ ಅವರು, “ನಿತ್ಯ ಕಟ್ಟಡ ನಿರ್ಮಾಣದ ಕಾಯಕದಲ್ಲಿ ತೊಡಗುವ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ಸರ್ಕಾರದಿಂದ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳ ಉಜ್ವಲ ಭವಿಷ್ಯ ರೂಪಿಸಬೇಕು,” ಎಂದು ಸಲಹೆ ನೀಡಿದರು.
ಕಟ್ಟಡ ಕಟ್ಟುವ ಮೂಲಕ ಸಮಾಜ ನಿರ್ಮಾಣ ಮಾಡುವ ಕಾರ್ಮಿಕರ ಈ ನೂತನ ಸಂಘವು, ಸಮಾಜಮುಖಿ ಕಾರ್ಯಗಳಲ್ಲಿಯೂ ಹೆಜ್ಜೆ ಮುಂದಿಡಲಿ ಎಂದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಫಾದರ್ ಸತೀಶ್ ಫರ್ನಾಂಡಿಸ್, ರಾಜಾ ಸುಭಾಷ್ ಚಂದ್ರ ನಾಯಕ್, ಸತ್ತರ್ ಬಂಗ್ಲೆವಾಲೆ, ಶಬ್ಬೀರ್ ಜಾಲಹಳ್ಳಿ, ಶರ್ಪೋದ್ದಿನ್ ಪೋತ್ನಾಳ, ಚೆನ್ನಪ್ಪ, ಮಾಂತೇಶ್ ನಾಯಕ್, ಈರಣ್ಣ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

