ಮಾನ್ವಿ : ನ. 21- ಮಕ್ಕಳಿಗಾಗಿ ವಿಶೇಷ ಕಾನೂನು ಗಳಿದ್ದು, ಅನ್ಯಾಯ ವಿರುದ್ಧ ಧ್ವನಿ ಎತ್ತಲು ಹಿಂಜರಿಯಬಾರದು ಎಂದು ಸಿವಿಲ್ ನ್ಯಾಯಾಧೀಶರಾದ ಆನಂದ್ ಎಚ್ ಕೊಣ್ಣೂರು ಕಿವಿಮಾತು ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ಮಾನ್ವಿ ಹಾಗೂ ತಾಲೂಕ ನ್ಯಾಯವಾದಿಗಳ ಸಂಘ ಮಾನ್ವಿ ಮತ್ತು ಶಿಕ್ಷಣ ಇಲಾಖೆ ಮಾನ್ವಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಹಾಗೂ ಮಕ್ಕಳ ಹಕ್ಕುಗಳು,ಬಾಲ್ಯ ವಿವಾಹ ಮತ್ತು ಮಕ್ಕಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮಗೆ ಆಗುತ್ತಿರುವ ಅನ್ಯಾಯಗಳನ್ನು ಸಂಕೋಚವಿಲ್ಲದೆ ಕಾನೂನು ಅಡಿಯಲ್ಲಿ ನ್ಯಾಯ ಪಡೆದುಕೊಳ್ಳಬಹುದು. ಮಕ್ಕಳ ಮೇಲಿನ ದೌರ್ಜನ್ಯ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಡೆ ನಡೆಯುತ್ತಿವೆ. ಸಮಾಜಕ್ಕೆ ಹೆದರಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗ, ವಿವಿಧ ಕಾನೂನು ಇವೆ. ದೌರ್ಜನ್ಯ ತಡೆಗೆ ಪೋಕ್ಸೋ ಕಾಯ್ದೆ ಜಾರಿ ಮಾಡಲಾಗಿದೆ. ಅನ್ಯಾಯವಾದರೆ ಪೊಲೀಸ್ ಇಲಾಖೆಗೆ ಸಂಬಂಧ ಪಟ್ಟವರಿಗೆ ದೂರು ನೀಡಬೇಕು. ಗುಪ್ತ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ನೀಡಲಾಗುತ್ತದೆ. ದೂರುದಾರರ ಹೆಸರು ಬಹಿರಂಗ ಪಡೆಸುವುದಿಲ್ಲ ಹಾಗಾಗಿ ಕಾನೂನಿನ ಸದುಪಯೋಗ ಪಡೆಯಬೇಕು. ದುರುಪಯೋಗ ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಿಂದ ದೂರ ಉಳಿದು ಕಲಿಕೆಗೆ ಹೆಚ್ಚು ಹೊತ್ತು ಕೊಡಬೇಕು ಎಂದು ತಿಳಿಸಿದರು.
ಇದೆ ವೇಳೆ ಶ್ರೀದೇವಿ ಶರಣ ಪಾಟೀಲ್ ವಕೀಲರು ವಿಶೇಷ ಉಪನ್ಯಾಸ ನೀಡಿದರು. ವಕೀಲರಾದ ಸ್ಟೆಲ್ಲಾ ಶಾರ್ಲೇಟ್ ಮತ್ತು ಗುಂಡಮ್ಮ ಮೇಟಿ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ದಮನಿ ವಹಿಸಿದ್ದರು.
ಇದಕ್ಕೂ ಮುನ್ನಾ ಶಾಲೆಯಲ್ಲಿನ ಬಿಸಿಯೂಟ ಮತ್ತು ಶುಚಿತ್ವ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಅರ್ಚನಾ ಯಾದವ್, ವಕೀಲರಾದ ಚನ್ನಬಸವ ನಾಯಕ್ ಬಲ್ಲಟಗಿ, ಉಪ ಪ್ರಚಾರ್ಯರಾದ ಸಂಜೀವ್ ಸುಧಾಕರ್, ವಕೀಲರಾದ ಮನೋಹರ ವಿಶ್ವಕರ್ಮ ಸೇರಿದಂತೆ ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದತ್ತಾತ್ರೇಯ ಕೊಟ್ನೆಕಲ್ ವಕೀಲರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *