ಮೈಸೂರಿನಲ್ಲಿ ಕೆಆರ್‌ಎಸ್ ಪಕ್ಷದಿಂದ ಯುವ ಸಮಾವೇಶ ಮತ್ತು ಡ್ರಗ್ಸ್ ವಿರುದ್ಧ ಬೃಹತ್ ಜಾಗೃತಿ ಜಾಥಾ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಜನವರಿ 12, 2026 ರಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕವು ಮೈಸೂರಿನ ಪುರಭವನದಲ್ಲಿ ಬೃಹತ್ ಯುವ ಸಮಾವೇಶವನ್ನು ಹಮ್ಮಿಕೊಂಡಿದೆ. ಇದೇ ದಿನಾಂಕವು ಪಕ್ಷದ ಸೈನಿಕರಿಗೆ ಸ್ಫೂರ್ತಿಯಾಗಿದ್ದ ಮಾಜಿ ಕಾರ್ಯಾಧ್ಯಕ್ಷ ಎಸ್. ಎಚ್. ಲಿಂಗೇಗೌಡರ ಜನ್ಮದಿನವಾಗಿದ್ದು, ಅಂದು ಅವರನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮವೂ ನಡೆಯಲಿದೆ. ಸಮಾವೇಶದಲ್ಲಿ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ಅಧ್ಯಕ್ಷ ದೀಪಕ್ ಸಿ. ಎನ್., ಕಾರ್ಯಾಧ್ಯಕ್ಷ ರಘು ಜಾಣಗೆರೆ ಹಾಗೂ ಯುವ ಘಟಕದ ಅಧ್ಯಕ್ಷೆ ಜನನಿ ವತ್ಸಲ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಸಮಾವೇಶದ ಮುಕ್ತಾಯದ ನಂತರ ‘ಡ್ರಗ್ಸ್ ಮುಕ್ತ ಕರ್ನಾಟಕ’ಕ್ಕಾಗಿ ನಗರದ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಸುಮಾರು 4 ಕಿಲೋಮೀಟರ್‌ಗಳ ಬೃಹತ್ ಕಾಲ್ನಡಿಗೆ ಜಾಥಾವನ್ನು ಆಯೋಜಿಸಲಾಗಿದೆ. ಇಂದಿನ ಸರ್ಕಾರಗಳು ಯುವಜನರ ಭವಿಷ್ಯವನ್ನು ಕಡೆಗಣಿಸುತ್ತಿರುವ ಈ ಸಂದರ್ಭದಲ್ಲಿ, ಯುವಕರಲ್ಲಿ ದೇಶಭಕ್ತಿ ಮತ್ತು ಸ್ವಾಭಿಮಾನ ತುಂಬುವ ಮೂಲಕ ವ್ಯವಸ್ಥೆಯನ್ನು ಸರಿಪಡಿಸಲು ಕೆಆರ್‌ಎಸ್ ಪಕ್ಷವು ನಿರಂತರವಾಗಿ ಶ್ರಮಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ದಾವಣಗೆರೆ, ಕೊಪ್ಪಳ ಮತ್ತು ಬೆಳಗಾವಿಯಲ್ಲಿ ಯಶಸ್ವಿಯಾಗಿ ಯುವ ಸಮಾವೇಶಗಳನ್ನು ನಡೆಸಿದ ನಂತರ ಈಗ ಮೈಸೂರಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷವಾಗಿ ಕೆಳವರ್ಗದ ಯುವಜನರನ್ನು ಸಶಕ್ತಗೊಳಿಸುವ ಮತ್ತು ಅವರನ್ನು ಪ್ರಾಮಾಣಿಕ ರಾಜಕಾರಣದಲ್ಲಿ ತೊಡಗಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ತರಲು ಸಾಧ್ಯವೆಂದು ಪಕ್ಷವು ಬಲವಾಗಿ ನಂಬಿದೆ. ಇಂದು ಯುವಜನತೆ ನಿರುದ್ಯೋಗ, ಮದ್ಯಪಾನ ಮತ್ತು ಡ್ರಗ್ಸ್‌ನಂತಹ ಗಂಭೀರ ಸಮಸ್ಯೆಗಳಿಂದ ಕಂಗಾಲಾಗಿದ್ದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಈ ಜಾಥಾ ಆಯೋಜಿತವಾಗಿದೆ. ಆದ್ದರಿಂದ ಮೈಸೂರಿನ ಯುವಜನರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಪಕ್ಷವು ಮನವಿ ಮಾಡಿದೆ

