ತಾಳಿಕೋಟಿ: ತಾಲೂಕಿನ ಕಲಕೇರಿ ಗ್ರಾಮದ ಸಮಾಜ ಸೇವಕ ದಾವಲಸಾಬ ದ್ಯಾಪೂರ ಇವರಿಂದ ಕಲಕೇರಿ ಕ್ಲಸ್ಟರ್ ಮಟ್ಟದ ವ್ಯಾಪ್ತಿಯ ಸರಕಾರಿ ಕನ್ನಡ ಹಾಗೂ ಉರ್ದು ಶಾಲೆಗಳ ಮಕ್ಕಳಿಗೆ ನೋಟ್ ಬುಕ್ ಹಾಗೂ ಕಂಪಾಸ್ ಬಾಕ್ಸ್ ಗಳನ್ನು ವಿತರಿಸಲಾಯಿತು. ತಾಲೂಕಿನ ಸರಕಾರಿ ಉರ್ದು ಶಾಲೆ ಕ್ಲಸ್ಟರ್ ವ್ಯಾಪ್ತಿಯ 14 ಶಾಲೆಗಳ 300 ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ಶಾಲೆಗಳ ಕ್ಲಸ್ಟರಿನ 580 ವಿದ್ಯಾರ್ಥಿಗಳಿಗೆ ಗುರುವಾರ ನೋಟ್ ಬುಕ್ ಮತ್ತು ಕಂಪಾಸ್ ಬಾಕ್ಸಗಳನ್ನು ವಿತರಿಸಲಾಯಿತು. ನಂತರ ಉರ್ದು ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಬಡ ಕುಟುಂಬಗಳಿಂದ ಬಂದಂತವರಾಗಿರುವುದರಿಂದ ಆರ್ಥಿಕ ಸಮಸ್ಯೆಯಿಂದಾಗಿ ಅವರು ಶಿಕ್ಷಣವನ್ನು ನಿಲ್ಲಿಸಬಾರದು ಎಂಬ ಉದ್ದೇಶದಿಂದ ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ ಮುಂದೆ ಇದರ ವ್ಯಾಪ್ತಿಯನ್ನು ಹೆಚ್ಚಿಸುವ ಗುರಿ ಇದೆ ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರ ನನಗೆ ಬೇಕು ಎಂದರು. ಕ್ಲಸ್ಟರ್ ಸಿಆರ್ಸಿ ಎ.ಐ.ಮಣೂರ ಅವರು ಮಾತನಾಡಿ ಸಮಾಜ ಸೇವಕರಾದ ದಾವಲಸಾಬ ದ್ಯಾಪೂರ( ಕಲಕೇರಿ) ಅವರ ಈ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಇದು ಅವರ ಸಾಮಾಜಿಕ ಬದ್ಧತೆ ಹಾಗೂ ಬಡವರ ಕುರಿತು ಅವರಿಗಿರುವ ಕಳಕಳಿಯನ್ನು ಎತ್ತಿ ತೋರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉರ್ದು ಶಾಲೆ ಮುಖ್ಯ ಗುರುಗಳಾದ ವಾಯ್.ಎಲ್. ಚೌಧರಿ, ಕನ್ನಡ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಿ.ಬಿ.ಕುಲಕರ್ಣಿ, ಶಿಕ್ಷಕಿಯರಾದ ಎಸ್ಎಸ್ ದಪೇದಾರ,ಆರ್.ಐ.ರೀಸಾಲದಾರ,ಎಸ್.ಎಸ್. ಕಾಂಬಳೆ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *