ಲಿಂಗಸುಗೂರು : ನಾಟಕ ನೋಡುವುದು ಹಾಗೂ ಓದುವದರಿಂದ ನಮ್ಮಲ್ಲಿ ಜ್ಞಾನ ವೃದ್ಧಿಯಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಜಿ ಗುರಿಕಾರ ಹೇಳಿದರು.
ತಾಲೂಕಿನ ಸಮೀಪದ ಆನೆಹೊಸೂರು ಗ್ರಾಮದಲ್ಲಿ ಮುದಗಲ್ ನ ಅಶೋಕಗೌಡ ಸುರೇಂದ್ರಗೌಡ ಗೆಳೆಯರ ಬಳಗ, ಕರ್ನಾಟಕ ಜಾನಪದ ಪರಿಷತ್ತು ಲಿಂಗಸುಗೂರು ತಾಲ್ಲೂಕು ಘಟಕ, ಶ್ರೀನಿವಾಸ ಜನ ಕಲ್ಯಾಣ ಟ್ರಸ್ಟ್ ಆನೆಹೊಸೂರು ಹಾಗೂ ಆನೆಹೊಸೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಜರುಗಿದ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಟಿ.ವಿ ಮಾಧ್ಯಮಗಳು ಬಂದ ನಂತರ ನಾಟಕಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ನಾಟಕ ನೋಡುವರ ಸಂಖ್ಯೆ ಕಡಿಮೆಯಾಗಿದೆ. ಕಾದಂಬರಿ ಆಧಾರಿತ ನಾಟಕಗಳು ಜ್ಞಾನ ಹೆಚ್ಚಿಸುವುದರ ಜತೆಗೆ, ನೈತಿಕ ಮೌಲ್ಯಗಳ ಪಾಠ ಹೇಳಿ ಕೊಡುತ್ತಿವೆ’ ಎಂದರು.ಸೇವೆಯಿಂದ ನಿವೃತ್ತಗೊಂಡ ಪಾಲಾಕ್ಷಿ ಮೂಲಿಮನಿ, ಶಶಿಕಲಾ ಸುಗೂರು, ಅಮೀನಸಾಬ ಕರಡಿ, ಗದ್ದೆಪ್ಪ ನಾಯಕ ಅವರಿಗೆ ಸನ್ಮಾನಿಸಿದರು. ಪಾಲಾಕ್ಷಿ ಮೂಲಿಮನಿ, ಶಶಿಕಲಾ ಸುಗೂರು, ಶರಣಪ್ಪ ಆನೆಹೊಸೂರು, ಅಮರೇಶ ಉಳಾಗಡ್ಡಿ ಮಾತನಾಡಿದರು. ಮುದಗಲ್ ಪುರಸಭೆ ಮಾಜಿ ಅಧ್ಯಕ್ಷ ಅಶೋಗೌಡ ಆದಾಪುರ ಅಧ್ಯಕ್ಷತೆ ವಹಿಸಿದ್ದರು.
ಆರು ದಿನ ನಡೆಯುವ ನಾಟಕದಲ್ಲಿ ಬುಧವಾರ ಚಿತ್ರದುರ್ಗದ ಸಾಣೆಹಳ್ಳಿ ಶಿವ ಸಂಚಾರ ಕಲಾ ತಂಡದಿಂದ ಜಂಗಮದೆಡೆಗೆ ನಾಟಕ ಪ್ರದರ್ಶನಗೊಂಡಿತು. ಜ. 8 ರಂದು ಕಳ್ಳರು ಸಂತೆ, ಜ. 9 ರಂದು ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಪ್ರದರ್ಶನ ಗೊಳ್ಳುತ್ತವೆ.
ಜ.11 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕಸಬಾ ಗ್ರಾಮದ ಯಕ್ಷ ರಂಗಾಯಣದ ರಪರೇಟರಿ ಕಲಾ ತಂಡದಿಂದ ಸೋಮಿಯ ಸೌಭಾಗ್ಯ, ಜ. 12 ರಂದು ಗುಲಾಮನ ಸ್ವಾತಂತ್ರ್ಯ ಯಾತ್ರೆ, ಜ. 13 ರಂದು ಮಹಾತ್ಮರ ಬರವಿಗಾಗಿ ಎಂಬ ನಾಟಕಗಳು ಪ್ರದರ್ಶನಗೊಳ್ಳುತ್ತವೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮೀನಾಬಿ ಮೋದಿನಸಾಬ, ಕರ್ನಾಟಕ ಜಾನಪದ ಪರಿಷತ್ತು ಲಿಂಗಸುಗೂರು ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ನಡುವಿನ ಮನಿ, ತಾಲ್ಲೂಕು ಪಂಚಾಯಿತಿ ಕೆಡಿಪಿ ಸದಸ್ಯ ಶರಣಪ್ಪ ಕಟಗಿ, ಸಂಗಪ್ಪ ಭಾವಿಮನ, ಸಂಗಪ್ಪ ಅಂಗಡಿ, ಸಂಜೀವಪ್ಪ ಮೂಲಿಮನಿ, ಶಿವನಗೌಡ ಪಾಟೀಲ ರಾಮತನಾಳ, ಹುಸೇನಸಾಬ ಕರ್ನಾಚಿ ಇದ್ದರು.

