ಮಾನ್ವಿ: ಸ್ಥಳೀಯ ಕಲ್ಮಠ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಷಟ್ ಕ್ರಿಯೆಗಳ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 6:30ರಿಂದ 7:30ರ ಅವಧಿಯಲ್ಲಿ ನಡೆದ ಈ ಶಿಬಿರವು ಕೆಲವು ಸರಳ ವ್ಯಾಯಾಮಗಳೊಂದಿಗೆ ಪ್ರಾರಂಭವಾಗಿ, ನಂತರ ವಿದ್ಯಾರ್ಥಿಗಳಿಗೆ ಕಪಾಲಭಾತಿ ಪ್ರಾಣಾಯಾಮ, ಅಲ್ಟರ್ನೇಟಿವ್ ಕಪಾಲಭಾತಿ ಹಾಗೂ ಬಸ್ತ್ರಿಕಾ ಕಪಾಲಭಾತಿಯ ಜೊತೆಗೆ ನಾಡಿ ಶುದ್ದಿ ಪ್ರಾಣಾಯಾಮದ ಬಗ್ಗೆ ವಿಸ್ತಾರವಾದ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯೋಗ ಗುರು ಅನ್ನದಾನಯ್ಯನವರು, ಯೋಗದ ಷಟ್ ಕ್ರಿಯೆಗಳು ಮನುಷ್ಯನ ಸ್ವಾಸ್ತ್ಯದ ಸಂಕೇತಗಳಾಗಿವೆ ಎಂದು ತಿಳಿಸಿದರು. ವಿಶೇಷವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಅಲರ್ಜಿ ಮತ್ತು ಸೈನಸ್‌ನಂತಹ ಸಮಸ್ಯೆಗಳನ್ನು ಹತೋಟಿಗೆ ತರಲು ಹಾಗೂ ಅಸ್ತಮಾವನ್ನು ಪರಿಣಾಮಕಾರಿಯಾಗಿ ಎದುರಿಸಲು ಜಲ ನೇತಿ ಮತ್ತು ಸೂತ್ರ ನೇತಿ ಅಭ್ಯಾಸಗಳು ಅತ್ಯುತ್ತಮ ಫಲಿತಾಂಶವನ್ನು ನೀಡಬಲ್ಲವು ಎಂದು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಜೀವನೇಶ್ವರಯ್ಯ ಹಿರೇಮಠ, ಆಡಳಿತಾಧಿಕಾರಿ ಉಮಾಶಂಕರ್, ಉಪನ್ಯಾಸಕಿ ಪ್ರಿಯಾಂಕ ಹಾಗೂ ಕಾಲೇಜಿನ ಎಲ್ಲಾ ವೈದ್ಯ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

