ರಾಯಚೂರು: ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಮತದಾನದ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಂದು ಮತವು ಅಭ್ಯರ್ಥಿಯ ಗೆಲುವು ಮತ್ತು ಸೋಲನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿದೆ ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ತಿಳಿಸಿದರು. ದಿನಾಂಕ 7-1-2026ರಂದು ರಾಯಚೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಮತ್ತು ಸ್ವೀಪ್ ಸ್ಪರ್ಧಾ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಮತಯಂತ್ರಗಳ ಮೂಲಕ ಮತದಾನದ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ಜರುಗುತ್ತಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿವಿಧ ಹಂತದ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಮತ್ತು ಸ್ನಾತಕೋತ್ತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್‌ಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ. ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾಗುವ ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಚುನಾವಣಾ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಮಾದರಿ ಮತದಾರರ ಪಟ್ಟಿಯ ಸಿದ್ಧತೆಯ ಕುರಿತು ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿಗಳನ್ನು ತಿಳಿಯಲು ಸಹಕಾರಿಯಾಗಿವೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಶಿಕ್ಷಣ ವಿಭಾಗದ ನೋಡಲ್ ಅಧಿಕಾರಿ ಡಾ. ದಂಡಪ್ಪ ಬಿರಾದಾರ ಅವರು, ಈ ವರ್ಷ ಶಾಲಾ-ಕಾಲೇಜು ಮಟ್ಟದಲ್ಲಿ ಹಾಗೂ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿರುವ ಬಗ್ಗೆ ಸಭೆಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಈ ಸಭೆಯಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ಹನುಮಂತಪ್ಪ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ, ಚುನಾವಣೆ ತಹಸಿಲ್ದಾರ್ ಪರಶುರಾಮ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರ ವಕ್ರಾಣಿ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಆದಿಕವಿ ಮಹರ್ಷಿ ವಾಲ್ಮೀಕಿ ರಾಯಚೂರು ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿವಿಧ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು, ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಡಯಟ್ ಕಾಲೇಜಿನ ಅಧಿಕಾರಿಗಳು ಮತ್ತು ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು. ರಾಯಚೂರು ನಗರ ಮತ್ತು ಗ್ರಾಮೀಣ ಭಾಗದ ಮತಗಟ್ಟೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿಯ ಸಿಬ್ಬಂದಿಗಳು ಸಭೆಯಲ್ಲಿದ್ದು, ಕೊನೆಯಲ್ಲಿ ಚುನಾವಣಾ ಮಾಸ್ಟರ್ ತರಬೇತಿದಾರರಾದ ಸದಾಶಿವಪ್ಪ ಅವರು ವಂದದಿಸಿದರು

