ರಾಯಚೂರು ಜನವರಿ 08 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಉತ್ಸವ-2026 ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇದು ಐತಿಹಾಸಿಕ ಪ್ರಯತ್ನ. ಜಿಲ್ಲಾಡಳಿತಕ್ಕೆ ಧನ್ಯವಾದಗಳು. ನಮ್ಮೂರಲ್ಲೂ ಉತ್ಸವ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದೆವು. ಈದೀಗ ಆ ಕಾಲ ಕೂಡಿ ಬಂದಿದ್ದು ನಮ್ಮ ಪುಣ್ಯ. ಇದು ಮನೆಮನೆಯ ಉತ್ಸವ ಆಗಬೇಕು. ಜಿಲ್ಲಾಡಳಿತವು ಅರ್ಥಪೂರ್ಣ ಕಾರ್ಯಕ್ಕೆ ಮುಂದಾಗಿದೆ ಎನ್ನುವ ಅಭಿನಂದನಾರ್ಹ ಸಲಹೆಗಳು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರ ಅಧ್ಯಕ್ಷತೆಯಲ್ಲಿ ಜನವರಿ 08ರಂದು ನಡೆದ ರಾಯಚೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಕೇಳಿಬಂದವು.
ಜಿಪಂ ಸಭಾಂಗಣದಲ್ಲಿ ನಡೆದ ಅಸಾಹಿತಿಗಳು, ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಬುದ್ದಿಜೀವಿಗಳು, ಮಹಿಳಾ ಪ್ರಮುಖರು, ಹೋರಾಟಗಾರರ ಸಮ್ಮುಖದಲ್ಲಿ ಸಭೆಯಲ್ಲಿ ಮೊದಲಿಗೆ ಅಪರ ಜಿಲ್ಲಾಧಿಕಾರಿಗಳು ಉತ್ಸವದ ರೂಪುರೇಷಗಳ ಬಗ್ಗೆ ತಿಳಿಸಿದರು.
ಈ ವೇಳೆ ಜಿಲ್ಲೆಯ ಬೇರೆ ಬೇರೆ ಗಣ್ಯಮಹನಿಯರು ಮಾತನಾಡಿ ಉತ್ಸವಕ್ಕೆ ನಾನಾ ಸಲಹೆ ನೀಡಿದರು. ಇದು ಮನೆಮನೆಗಳ ಉತ್ಸವಾಗಲಿ ಎಂದು ಕನ್ನಡಪರ ಸಂಘಟನೆಯ ಸಿ.ಕೆ.ಜೈನ್ ಸಲಹೆ ಮಾಡಿದರು. ಎಲ್ಲರ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮ ಇದಾಗಲಿ ಎಂದು
ಕರ್ನಾಟಕ ಸಂಘದ ಶ್ರೀನಿವಾಸ ತಿಳಿಸಿದರು. ಐತಿಹಾಸಿಕ ಕರ್ನಾಟಕ ಸಂಘದಿಂದ ಉತ್ಸವದ ಮೆರವಣಿಗೆ ಆರಂಭಿಸಬೇಕು. ಸ್ಮರಣ ಸಂಚಿಕೆ ಪ್ರಕಟಿಸಬೇಕು ಎಂದು ಕನ್ನಡಪರ ಹೋರಾಟಗಾರಾದ ಮುರಳೀಧರ ಸಲಹೆ ಮಾಡಿದರು. ಹಳ್ಳಿಹಳ್ಳಿಗಳಿಂದ ಬಸ್ಸಗಳ ವ್ಯವಸ್ಥೆ ಮಾಡಿ ಜನ ಸೇರಲು ಅನುಕೂಲ ಕಲ್ಪಿಸಿ, ಇದನ್ನು ಜನೋತ್ಸವ ಮಾಡಬೇಕು ಎಂದು ಹೋರಾಟಗಾರರಾದ ವಿನೋದ ರೆಡ್ಡಿ ಅವರು ಸಲಹೆ ಮಾಡಿದರು. ಇದು ನಮ್ಮ ಕಾರ್ಯಕ್ರಮ. ಎಲ್ಲರೂ ನೋಡಿ ಮೆಚ್ಚುವಂತೆ ಈ ಉತ್ಸವ ಮಾಡೋಣ. ಹಂಪಿ ಉತ್ಸವ, ಕರಾವಳಿ ಉತ್ಸವ, ಲಕ್ಕುಂಡಿ ಉತ್ಸವ, ಬನವಾಸಿ ಉತ್ಸವ, ಕಿತ್ತೂರ ಉತ್ಸವ ರೀತಿ ಇನ್ಮೇಲೆ ರಾಯಚೂರು ಉತ್ಸವವು ಪ್ರತಿ ವರ್ಷ ನಡೆಯಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಶಾಂತಪ್ಪ ಸಲಹೆ ಮಾಡಿದರು.
ಜಿಲ್ಲೆಯ ಎಲ್ಲ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ ಸಿಗಬೇಕು ಎಂದು ಕನ್ನಡ ಜಾಗೃತಿ ಸಮಿತಿಯ ಸದಸ್ಯರು ಸಲಹೆ ಮಾಡಿದರು. ಉತ್ಸವದಲ್ಲಿ ರಾಯಚೂರು ಹಿರಿಯ ಮಹನಿಯರ ಪರಿಚಯದ ಭಾವಚಿತ್ರ ಅಳವಡಿಸಲು ಬಹುಜನ ಸಂಘಟನೆಯ ಜೈಭೀಮ ಸಲಹೆ ಮಾಡಿದರು.
ಉತ್ಸವದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಉತ್ಸವವನ್ನು ಪ್ರತಿ ವರ್ಷ ನಡೆಸಬೇಕು ಎಂದು ನರೇಂದ್ರ ಅವರು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಬಹಳಷ್ಟು ಜಿಮ್ ಇದ್ದು, ಬಾಲಿಬಿಲ್ಡರಗಳ ಸ್ಪರ್ಧೆ ಆಯೋಜನೆ ಮಾಡಬೇಕು ಎಂದು ಪತ್ರಕರ್ತರಾದ ಕೆ.ಸತ್ಯನಾರಾಯಣ ಹಾಗೂ ಬಾಡಿ ಬಿಲ್ಡರ್ ಅಶೋಸಿಯೇಶನ್ ಸಂಘದ ಸುಧಾಕರ ಅವರು ಸಲಹೆ ಮಾಡಿದರು. ಬಾಡಿ ಬಿಲ್ಡರ್ ಕಿರಣ್ ವಾಲ್ಮಿಕಿ ಅವರಿಗೆ ಆಹ್ವಾನಿಸಬೇಕು ಎಂದು ಸಿ.ಕೆ.ಜೈನ್ ತಿಳಿಸಿದರು.
ರಾಯಚೂರು ಜಿಲ್ಲೆಯ ಪತ್ರಿಕಾ ಇತಿಹಾಸದ ಬಗ್ಗೆ ವಿಚಾರಗೋಷ್ಠಿ ನಡೆಸಲು ಹಿರಿಯ ಪತ್ರಕರ್ತರಾದ ಗುರುನಾಥ ಅವರು ಸಲಹೆ ಮಾಡಿದರು. ಉತ್ಸವದಲ್ಲಿ ಮಾಧ್ಯಮಗೋಷ್ಠಿಗೆ ಅವಕಾಶವಿರಲಿ ಎಂದು ಪತ್ರಕರ್ತರಾದ ಖಾನಸಾಬ ಮೋಮಿನ್ ತಿಳಿಸಿದರು.
ಉತ್ಸವದಲ್ಲಿ ಅಂತಾರಾಷ್ಟ್ರೀಯ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಹಿರಿಯ ಪತ್ರಕರ್ತರಾದ ಅರವಿಂದ ಕುಲಕರ್ಣಿ ಅವರು ಸಲಹೆ ಮಾಡಿದರು.
ಉತ್ಸವ ಹಿನ್ನೆಲೆಯಲ್ಲಿ ರಾಯಚೂರು ಕೋಟೆಗೆ ವಿದ್ಯುತ್ ಅಲಂಕಾರ ಮಾಡಲು ಮೊಮಿನ್ ಅವರು ಸಲಹೆ ಮಾಡಿದರು.
ಜಿಲ್ಲೆಯ ಎಲ್ಲ ಸಂಘಟನೆಯ ಪ್ರತಿನಿಧಿಗಳಿಗೆ ಆಯಾ ವೇದಿಕೆಗೆ ಜವಾಬ್ದಾರಿ ವಹಿಸಬೇಕು ಎಂದು ಕಲಾ ಸಂಸ್ಥೆಯ ಅಧ್ಯಕ್ಷರು ಸಲಹೆ ಮಾಡಿದರು.
ಬಿತ್ತನೆ ಬೀಜಗಳ ಬಗ್ಗೆ ಜನತೆ ಮೋಸ ಹೋಗುತ್ತಿದ್ದಾರೆ. ಹಾಗಾಗಿ ಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ
ಕೃಷಿ ಉತ್ಸವ ಮಾಡಬೇಕು ಯುವ ಮುಖಂಡರು ಸಲಹೆ ಮಾಡಿದರು.
ವಿಚಾರಗೋಷ್ಠಿಯಲ್ಲಿ ಸಂವಿಧಾನ ವಿಷಯದ ಚರ್ಚೆಗೆ ಅವಕಾಶ ಮಾಡಬೇಕು ಎಂದು ಚಿಂತಕರು ಸಲಹೆ ಮಾಡಿದರು.
ಉತ್ಸವದಲ್ಲಿ ಪ್ರತಿ ಮನೆಯ ಹೆಣ್ಣುಮಕ್ಕಳು ಪಾಲ್ಗೊಳ್ಳುವ ಹಾಗೆ ಮಹಿಳಾ ಕಮೀಟಿ ರಚಿಸಿ ಅವಕಾಶ ನೀಡಬೇಕು ಎಂದು ಪ್ರತಿಭಾ ರೆಡ್ಡಿ ಸಲಹೆ ಮಾಡಿದರು.
ರಾಯಚೂರು ಜಿಲ್ಲೆಯು ವಚನ ಮತ್ತು ದಾಸ ಸಾಹಿತ್ಯಕ್ಕೆ ಹೆಸರಾಗಿದ್ದು, ದಲಿತ ಬಂಡಾಯ ಸಾಹಿತ್ಯ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಸಾಹಿತಿ ಬಾಬು ಬಂಡಾರಿಗಲ್ ತಿಳಿಸಿದರು.
ಈ ಉತ್ಸವದಲ್ಲಿ ಜಿಲ್ಲೆಯ ಎಲ್ಲ ಭಾಗದ ಸಾಹಿತಿಗಳಿಗೆ ಅವಕಾಶ ಲಭಿಸಬೇಕು ಎಂದು ಹಿರಿಯ ಸಾಹಿತಿಗಳಾದ ರಂಗಣ್ಣ ಪಾಟೀಲ ಸಲಹೆ ಮಾಡಿದರು.
ಮಹಿಳಾ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾಲಾ ಭಜಂತ್ರಿ ಅವರು ತಿಳಿಸಿದರು.
ಮಹಿಳಾ ದೌರ್ಜನ್ಯ ಹೆಚ್ಚುತ್ತಿವೆ. ಇಂತಹ ವಿಷಯಗಳ ಬಗ್ಗೆ ವಿಚಾರಗೋಷ್ಠಿಯಲ್ಲಿ ಅವಕಾಶವಿರಲಿ ಎಂದು ಮಹಿಳಾ ಹೋರಾಟಗಾರರು ಸಲಹೆ ಮಾಡಿದರು.
ರಾಯಚೂರು ಸಿಟಿಯ ಎಲ್ಲಾ ಕಡೆಗೆ ವಿದ್ಯುದೀಪ ಅಳವಡಿಸಿ ನಗರ ಸೌಂದರ್ಯಕ್ಕೆ ಒತ್ತು ಕೊಡಬೇಕು ಎಂದು
ನರೇಂದ್ರ ಆರ್ಯ ಸಲಹೆ ಮಾಡಿದರು.
ಮೆರವಣಿಗೆಯಲ್ಲಿ ಸ್ಥಬ್ಧಚಿತ್ರಕ್ಕೆ ಅವಕಾಶವಿರಬೇಕು. ಜನಜಾಗೃತಿಯ ಕಿರುಚಿತ್ರಗಳ ಪ್ರದರ್ಶನ ಮಾಡಬೇಕು. ಕರಾಟೆ ಸ್ಪರ್ಧೆಗೂ ಅವಕಾಶವಿರಬೇಕು ಎಂದು ಪತ್ರಕರ್ತ ರಘುವೀರ ನಾಯಕ ಸಲಹೆ ಮಾಡಿದರು.
ಎಲ್ಲರೂ ಸೇರಿ ಉತ್ಸವ ಯಶಗೊಳಿಸೋಣ ಎಂದು ಹಿರಿಯರಾದ ಶಶಿಕಲಾ ಭೀಮರಾಯ ಸಲಹೆ ಮಾಡಿದರು.
ಉತ್ಸವದಲ್ಲಿ ಕ್ರೀಡಾಪಟುಗಳಿಗೆ ಸನ್ಮಾನಿಸಬೇಕು ಎಂದು ಖೋಖೋ ಅಸೋಸಿಯೇಶನದಿಂದ ಸಲಹೆ ಬಂದಿತು. ಉತ್ಸವದಲ್ಲಿ ಏರ್ ಶೊ ಗೆ ವ್ಯವಸ್ಥೆ ಮಾಡಬೇಕು ಎಂದು ಯುವಕರು ಸಲಹೆ ಮಾಡಿದರು.
ರಾಜ್ಯೋತ್ಸವ ಪುರಸ್ಕೃತರನ್ನು ಉತ್ಸವದಲ್ಲಿ ಸನ್ಮಾನಿಸಿ ಗೌರವಿಸಬೇಕು ಎಂದು ಪತ್ರಕರ್ತರಾದ ಅಣ್ಣಪ್ಪ ಮೇಟಿಗೌಡ ಅವರು ಸಲಹೆ ಮಾಡಿದರು.
ಸಭೆಯಲ್ಲಿ ಸವಿತಾ ಸಮಾಜದ ವಿ ಗೋವಿಂದ, ಛಾಯಾಗ್ರಹಕರ ಸಂಘದ ಅಧ್ಯಕ್ಷರಾದ ಶರಣಬಸವ ಹಿರೇಮಠ, ಮಹಿಳಾ ಮುಖಂಡರಾದ ಲಕ್ಷ್ಮಿ ನರಸಿಂಹ, ಗಾಯತ್ರಿ ಹಾಗೂ ಇತರರು ಸಲಹೆ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ, ಉತ್ಸವಕ್ಕೆ ಸ್ಪೂರ್ತಿದಾಯಕ ಸಲಹೆಗಳು ಕೇಳಿ ಬಂದಿವೆ. ಎಲ್ಲ ಸಲಹೆಗಳನ್ನು ಪರಿಗಣಿಸುತ್ತೇವೆ. ಪ್ರತಿ ತಾಲೂಕಿನಲ್ಲಿ ಸಹ ಸಂಘ ಸಂಸ್ಥೆಗಳ ಸಭೆಯನ್ನು ತಹಸೀಲ್ದಾರ ಮತ್ತು ಇಓ ಸಮ್ಮುಖದಲ್ಲಿ ಮಾಡಿಸುತ್ತೇವೆ ಎಂದು ತಿಳಿಸಿದರು.
ಈ ಉತ್ಸವವನ್ನು ಪ್ರತಿ ವರ್ಷ ನಡೆಸುವ ಹಾಗೆ ಕುಟುಂಬದ ರೀತಿ ಎಲ್ಲರೂ ಸೇರಿ ಉತ್ಸವ ಮಾಡೋಣ ಎಂದು ಮನವಿ ಮಾಡಿದರು.
ಹಂಪಿ ಉತ್ಸವ ಮಾದರಿಯಲ್ಲಿ ಏರ್ ಶೋ ಹಾಗೂ ಮಕ್ಕಳ ಉತ್ಸವಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಸಭೆಯಲ್ಲಿ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ, ತಹಸೀಲ್ದಾರರಾದ ಸುರೇಶ ವರ್ಮಾ, ಅಮರೇಶ ಬಿರಾದಾರ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *