ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಚಿಕ್ಕ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಭೂಮಿಕಾ (ತಂದೆ: ಭೀಮಣ್ಣ, ಈರಣ್ಣ ಕ್ಯಾಂಪ್) ಅವರು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್.ಎಚ್. ನಂ–1 ರಲ್ಲಿ 6ನೇ ಮತ್ತು 7ನೇ ತರಗತಿಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಕ್ರೀಡೆಯಲ್ಲಿ ತೋರಿದ ಆಸಕ್ತಿ ಹಾಗೂ ಪ್ರತಿಭೆಯಿಂದ ಕ್ರೀಡಾ ವಸತಿ ಶಾಲೆಯ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂಗಳೂರಿನ ವಿದ್ಯಾನಗರ ಕ್ರೀಡಾ ವಸತಿ ಶಾಲೆಗೆ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಆಯ್ಕೆಯಾಗಿರುವುದು ವಿಶಿಷ್ಟ ಸಾಧನೆ.

ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಭೂಮಿಕಾ ಅವರು, ದಿನಾಂಕ 15, 16 ಹಾಗೂ 17ರಂದು ಬಳ್ಳಾರಿಯಲ್ಲಿ SGFI ಆಯೋಜಿಸಿದ ರಾಜ್ಯಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ, ತಮ್ಮ ತಂಡದೊಂದಿಗೆ ದ್ವಿತೀಯ ಸ್ಥಾನ ಸಾಧಿಸಿದ್ದಾರೆ. ಈ ಸಾಧನೆಗೆ ತಂಡದ ತರಬೇತುದಾರರಾದ ಶ್ರೀ ಸತ್ಯನಾರಾಯಣ ಸರ್ ಅವರ ಮಾರ್ಗದರ್ಶನ ಮಹತ್ವಪೂರ್ಣವಾಗಿದೆ.

ಚಿಕ್ಕ ಗ್ರಾಮದ ಪ್ರತಿಭೆ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವುದು ಗ್ರಾಮಸ್ಥರಿಗೆ ಹೆಮ್ಮೆಯ ಸಂಗತಿ.

ಗ್ರಾಮದಿಂದಲೇ ಕ್ರೀಡಾ ವಸತಿ ಶಾಲೆಗೆ ಆಯ್ಕೆಯಾಗಿರುವುದು— ಈಗ ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು—ಗ್ರಾಮದ ಕ್ರೀಡಾ ಶಕ್ತಿ ಮತ್ತು ಮಕ್ಕಳ ಸಾಮರ್ಥ್ಯವನ್ನು ಸ್ಪಷ್ಟಪಡಿಸುತ್ತದೆ.

ಕುಮಾರಿ ಭೂಮಿಕಾ ಅವರ ಈ ಸಾಧನೆಗೆ ಶಾಲೆಯ ಶಿಕ್ಷಕರಾದ ಶ್ರೀ ಉಮೇದ್ ಸಾಹೇಬ್ ಪಿ, ಗ್ರಾಮದ ಗೌರವಾನ್ವಿತರು, ಗುರುಹಿರಿಯರು ಹಾಗೂ ಗ್ರಾಮಸ್ಥರು ಹಾರೈಸಿ ಅಭಿನಂದಿಸಿದ್ದಾರೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವತ್ತ ಭೂಮಿಕಾ ಹೆಜ್ಜೆಯಿಡಲಿ ಎಂಬುದು ಎಲ್ಲರ ಆಶಯ.

Leave a Reply

Your email address will not be published. Required fields are marked *