ಅರಕೇರಾ :
ತಾಲೂಕಿನ ನಾಗಡದಿನ್ನಿ ಗ್ರಾಪಂ ವ್ಯಾಪ್ತಿಯ ಹೆಗ್ಗಡದಿನ್ನಿ ಗ್ರಾಮದ ನವನಗರದಲ್ಲಿ ಕಳೆದ ಅನೇಕ ದಿನಗಳಿಂದ ಎದುರಿಸುತ್ತಿರುವ ಅನೈರ್ಮಲ್ಯ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಆಗ್ರಹಿಸಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಇಒ ಅಣ್ಣರಾವ್ ನಾಯಕಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು. ಹೆಗ್ಗಡದಿನ್ನಿ ಗ್ರಾಮದಲ್ಲಿ ಪರಮ್ಮ ಗುರುಬಸ್ಸಪ್ಪ ಛಲವಾದಿ ಅವರ ಮನೆಯಿಂದ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್‌ವರೆಗೆ ಬಟ್ಟೆ ತೊಳೆದ ನೀರು, ಮಳೆ ನೀರು ಮತ್ತು ಡ್ರೆನೇಜ್ ನೀರು ಒಂದೇ ಸ್ಥಳದಲ್ಲಿ ನಿಲ್ಲುತ್ತಿದೆ. ಬಹುದಿನಗಳಿಂದ ಮಲೀನ ನೀರು ನಿಲ್ಲುತ್ತಿರುವುದರಿಂದ ಹೆಚ್ಚು ಹೂಳು ಸಂಗ್ರಹವಾಗಿದೆ. ಅಲ್ಲಿಯೇ ಡ್ರೆನೇಜ್ ಇದ್ದು, ಅಕ್ಕಪಕ್ಕದಲ್ಲಿ ಜಾಲಿ, ಗಿಡಗಂಟಿಗಳು ಅತಿಯಾಗಿ ಬೆಳೆದಿವೆ. ಅಲ್ಲಿಯೇ ನಾಯಿ, ಹಂದಿ, ಚೇಳು, ಹಾವು ಮತ್ತು ಇತರ ವಿಷಜಂತುಗಳು ಸೇರುತ್ತಿವೆ. ಇದರಿಂದ ದುರ್ವಾಸನೆ ದಟ್ಟವಾಗಿ ಹರಡುತ್ತಿದ್ದರಿಂದ ಸ್ಥಳೀಯರು ಮೂಗು ಮುಚ್ಚಿಕೊಂಡೇ ನಡೆದು ಹೋಗುವ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿವಾಸಿಗರು ಮಲೀನ ನೀರು ಮೈಗಂಟಿಸಿಕೊಂಡುಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದ್ದು, ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರ-02 ರಲ್ಲಿ ಮಕ್ಕಳ ಚಟುವಟಿಕೆಗಳಿಗೆ ತೀವ್ರ ಅಡ್ಡಿ ಉಂಟಾಗಿದೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಇಲ್ಲಿ 40-50 ಕುಟುಂಬಗಳು ಪರಿಶಿಷ್ಟ ಜಾತಿ ಜನಾಂಗದ ಆರ್ಥಿಕವಾಗಿ ದುರ್ಬಲವಾದ ದಲಿತ ಕುಟುಂಬಗಳು ನೆಲೆಸಿದ್ದು ಸಮಸ್ಯೆಯಿಂದ ಹೆಚ್ಚು ಬಾಧಿತರಾಗಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರಿಗೆ ಹಲವು ಬಾರಿ ಮೌಖಿಕವಾಗಿ ಮನವಿ ನೀಡಿದರೂ ಇದುವರೆಗೂ ಯಾವುದೇ ಪರಿಹಾರ ಒದಗಿಸಿರುವುದಿಲ್ಲ ಎಂದರು.
ಡ್ರೆನೇಜ್ ಹೂಳು ತೆರವು, ಗಿಡಗಂಟಿಗಳ ಸ್ವಚ್ಛತೆ ಹಾಗೂ ಚರಂಡಿ ನೀರು ಸುಗಮವಾಗಿ ಹರಿಯುವ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮರಿಲಿಂಗಪ್ಪ ಒತ್ತಾಯಿಸಿದರು.
ಅರಕೇರಾ : ಮರಿಲಿಂಗಪ್ಪ, ತಾಲೂಕು ಅಧ್ಯಕ್ಷ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ, ತಾಲೂಕು ಘಟಕ, ಅರಕೇರಾ

