ಕಂಪ್ಲಿ : ಹಿಂದು ಸಮಾಜವನ್ನು ಸಂಘಟಿಸಿ ಜಾಗೃತಿಗೊಳಿಸಲು ಹಾಗೂ ಭಾರತವನ್ನು ವಿಶ್ವಗುರುವಾಗಿಸಲು ಹಿಂದು ಸಮ್ಮೇಳನ ಆಯೋಜಿಸಲಾಗಿದೆ ಎಂದು ಹಿಂದು ಸಮ್ಮೇಳನ ಸಮಿತಿ ತಾಲೂಕು ಅಧ್ಯಕ್ಷ ಎನ್.ಎಂ.ಪತ್ರೆಯ್ಯಸ್ವಾಮಿ ಹೇಳಿದರು.
ನಗರದ ಅತಿಥಿಗೃಹ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿಂದು ಸಮ್ಮೇಳನ ತಾಲೂಕು ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ನಾಲ್ಕು ಕಡೆ ಸಮ್ಮೇಳನ ಆಯೋಜಿಸಲಾಗಿದೆ. ಕುಟುಂಬದಲ್ಲಿ ಒಗ್ಗಟ್ಟು ಮೂಡಿಸುವುದು, ನೆರೆಹೊರೆಯವರೊಂದಿಗೆ ಸಾಮರಸ್ಯ ಮೂಡಿಸುವುದು, ದೇಶದ ಸರ್ವಾಂಗೀಣ ಪ್ರಗತಿಗೆ ಸ್ವದೇಶಿ ವಸ್ತು ಬಳಕೆಗೆ ಪ್ರೇರೇಪಿಸುವುದು, ಪರಿಸರ ಸಂರಕ್ಷಣೆಯ ಮಹತ್ವ ತಿಳಿಸುವುದು, ನಾಗರೀಕರ ಕರ್ತವ್ಯ ಸೇರಿ ಪಂಚ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜ.12ರಂದು ಮಧ್ಯಾಹ್ನ ಉದ್ಭವ ಗಣಪತಿ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಿ ಕೆ.ಎಸ್.ಭವನದ ಬಳಿ ಸಮಾವೇಶಗೊಳ್ಳಲಿದೆ. ತುಮಕೂರಿನ ಬೆಳ್ಳಾವಿ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ, ಕಲ್ಮಠದ ಅಭಿನವ ಪ್ರಭು ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ವಕ್ತಾರ ಜಿ.ರವೀಂದ್ರ ಆಗಮಿಸಲಿದ್ದಾರೆ ಎಂದು ಹೇಳಿದರು.
ರಾಮಸಾಗರ, ಸಣಾಪುರ, ನಂ.10ಮುದ್ದಾಪುರ ಗ್ರಾಮದಲ್ಲೂ ಸಮ್ಮೇಳನ ಆಯೋಜಿಸಲಾಗುವುದು. ಸಮ್ಮೇಳನಗಳ ಯಶಸ್ಸಿಗಾಗಿ ಜ.4ರಂದು ಶಾರದಾ ಶಾಲೆಯಲ್ಲಿ ಎಲ್ಲ ಸಮುದಾಯದ ಮುಖಂಡರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಸಿ ಬೆಂಬಲ ಕೋರಲಾಗುವುದು ಎಂದರು.
ಸಮಿತಿ ಪದಾಧಿಕಾರಿಗಳಾದ ಯಣ್ಣಿ ವೆಂಕಟೇಶ, ಡಿ.ವಿ.ಸತ್ಯನಾರಾಯಣ, ಜಿ.ಶ್ರೀನಿವಾಸ, ಬಿ.ಎಂ.ಕರಿಬಸಯ್ಯಸ್ವಾಮಿ, ವೀರೇಶ, ಪ್ರಕಾಶ ಅಂಗಡಿ, ಕಿಶೋರ್, ಗೋವಿಂದರಾಜು, ಗುರ್ತಿ ಶ್ರೀನಿವಾಸುಲು, ಪ್ರಸನ್ನಕುಮಾರ್, ಕೃಷ್ಣ ಪ್ರಸಾದ್ ಇತರರಿದ್ದರು.

