ಸಿಂಧನೂರು ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ , ಕಲ್ಪತರು ದಿವಸ್ ಭಕ್ತಿ – ಸಾನಿಧ್ಯದಲ್ಲಿ ವೈಭವಯುತ ಆಚರಣೆ
ಸಿಂಧನೂರು : ಸಿಂಧನೂರಿನ ಬಪ್ಪುರು ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜ 01 ಕಲ್ಪತರು ದಿವಸವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು. ನೂತನ ವರ್ಷಾರಂಭದ ಈ ವಿಶೇಷ ದಿನದ ಅಂಗವಾಗಿ ಭಕ್ತರು ಆಶ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸಿ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಬೆಳಗಿನ ಪ್ರಾರ್ಥನಾ ಕಾರ್ಯಕ್ರಮಗಳು ದಿವ್ಯತ್ರಯ (ಶ್ರೀರಾಮಕೃಷ್ಣ ಪರಮಹಂಸ, ಮಾತಾ ಶಾರದೇ ದೇವಿ ಹಾಗೂ ಸ್ವಾಮಿ ವಿವೇಕಾನಂದ)ರಿಗೆ ಪೂಜೆಯಿಂದ ಆರಂಭವಾಗಿ, ಮಂಗಳಾರತಿ, ಉಷಾಕೀರ್ತನೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ಸುಂದರವಾಗಿ ಸಾಗಿದವು. ಭಕ್ತರ ಧಾರ್ಮಿಕ ಸ್ಪೂರ್ತಿಯಿಂದ ಆಶ್ರಮ ಪರಿಸರವೇ ಪಾವನ ವಾತಾವರಣವನ್ನು ಹೊಂದಿತು.
ಸಂಜೆಯ ವೇಳೆಯ ಕಾರ್ಯಕ್ರಮಗಳು ಮತ್ತಷ್ಟು ವೈವಿಧ್ಯಮಯ ಮತ್ತು ಭಕ್ತಿಪೂರ್ಣವಾಗಿದ್ದು, ಶ್ರೀ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಪ್ರಾರಂಭವಾಗಿ ಭಜನೆ, ಮಂಗಳಾರತಿ, ಭಗವನ್ನಾಮ ಸಂಕೀರ್ತನೆ, ಪುಷ್ಪಾರ್ಚನೆ ಮುಂತಾದ ಕಾರ್ಯಕ್ರಮಗಳು ನಡೆದವು. ಭಜನೆ ಮತ್ತು ಸಂಕೀರ್ತನೆಯ ವೇಳೆ ಭಕ್ತರಿಂದ ಉತ್ಸಾಹಭರಿತ ಪ್ರತಿಕ್ರಿಯೆ ದೊರಕಿದ್ದು, ಎಲ್ಲರೂ ಆಧ್ಯಾತ್ಮಿಕ ಚೈತನ್ಯದಲ್ಲಿ ಲೀನರಾದರು.
ಅಂತಿಮವಾಗಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಸದಾನಂದ ಮಹಾರಾಜರು ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಕಲ್ಪತರು ದಿವಸದ ವಿಶೇಷತೆ, ಇದರ ಇತಿಹಾಸ ಹಾಗೂ ಶ್ರೀರಾಮಕೃಷ್ಣ ಪರಮಹಂಸರ ಅನುಗ್ರಹದ ಮಹಿಮೆ ಕುರಿತು ಸವಿಸ್ತಾರವಾಗಿ ತಿಳಿಸಿದರು. “ಕಲ್ಪತರು ದಿವಸವು ಶ್ರೀರಾಮಕೃಷ್ಣ ಪರಮಹಂಸರ ದಯಾ-ಕರುಣೆಯ ಪ್ರತೀಕ. ಈ ದಿನದಲ್ಲಿ ಅವರ ಅನುಗ್ರಹ ಎಲ್ಲರಿಗೂ ಸಹಜವಾಗಿ ದೊರೆಯುತ್ತದೆ. ಮನಸ್ಸಿನ ಶುದ್ಧಿ, ಭಕ್ತಿ ಹಾಗೂ ನಿಸ್ವಾರ್ಥ ಸೇವೆಗೇ ನಿಜವಾದ ಕಲ್ಪತರು.”
“ಒಬ್ಬ ಭಕ್ತನು ನಂಬಿಕೆ ಮತ್ತು ಶ್ರದ್ಧೆಯಿಂದ ಪ್ರಾರ್ಥಿಸಿದಾಗ ಆಧ್ಯಾತ್ಮಿಕ ಮಾರ್ಗದಲ್ಲಿ ಪ್ರಗತಿ ಕಾಣುತ್ತಾನೆ. ಕಲ್ಪತರು ದಿವಸ ಮಾನವೀಯತೆ, ಪ್ರೀತಿ ಮತ್ತು ಸೇವೆಯ ಮೌಲ್ಯಗಳನ್ನು ನಮ್ಮಲ್ಲಿ ಪುನಃ ನೆನೆಪಿಸುತ್ತದೆ.”
“ಈ ದಿನ ದಿವ್ಯಾನಂದ, ದಯಾ ಹಾಗೂ ಆಶೀರ್ವಾದಗಳು ಸರ್ವರಿಗೂ ದೊರಕುವ ಶುಭದಿನ. ನಂಬಿಕೆಯೊಂದಿಗೆ ಪ್ರಾರ್ಥಿಸುವವನು ಆತ್ಮಶಕ್ತಿ ಮತ್ತು ಸದ್ಗುಣಗಳ ಸಂಪತ್ತನ್ನು ಪಡೆದುಕೊಳ್ಳುತ್ತಾನೆ” ಎಂದು ಮಹಾರಾಜರು ಭಕ್ತರಿಗೆ ಆಶೀರ್ವಚನ ನೀಡಿದರು.
