ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ 4 ನೇ ಸ್ಥಾನ ಇದ್ದರು ಕೂಡ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತಲೂ ಶಕ್ತಿಯುತವಾದದ್ದು ಈ ಪತ್ರಿಕಾರಂಗ, ನಮಗೆ ಸೀಮಿತ ಸ್ವಾತಂತ್ರ್ಯವಿದೆ, ನಿಮಗೆ ಅಸೀಮಿತ ಸ್ವಾತಂತ್ರ್ಯವಿದೆ. ಎಲ್ಲವೂ ದಾರಿ ತಪ್ಪಿದರೂ ಪತ್ರಿಕಾರಂಗ ಮಾತ್ರ ದಾರಿ ತಪ್ಪಬಾರದು ತಪ್ಪಿದರೆ ಪ್ರಜಾಪ್ರಭುತ್ವದ ವ್ಯವಸ್ಥೆ ದಾರಿ ತಪ್ಪಿದಂಗಾಗುತ್ತೆ ಎಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹೇಳಿದರು.
ನಗರದ ಎ.ಕೆ.ಗೋಪಾಲನಗರದಲ್ಲಿರುವ ತಮ್ಮ ಗೆಸ್ಟ್ ಹೌಸ್‌ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಂಡು ಮಾತನಾಡಿದ ಅವರು, ಈ ಹಿಂದೆ ಹಳಬರಿಗೆ ಇದ್ದ ನಿಷ್ಠೆ, ಬದ್ದತೆ, ಹೊಸಬರಿಗೆ ಇಲ್ಲದಂತೆ ಕಾಣುತ್ತದೆ. ಈ ಕೆಲಸಕ್ಕೆ ಈ ಸ್ಥಾನಕ್ಕೆ ಬರಬೇಕಾದವರಿಗೆ ನಿಷ್ಠೆ, ಬದ್ದತೆ, ಪ್ರಾಮಾಣಿಕತೆ ಇರಬೇಕು.
ರಾಜಕಾರಣಿಗಳಿಗೂ ಬದ್ದತೆ ಇರಬೇಕು. ಆದರೆ ನಾವು ದಾರಿ ತಪ್ಪಿದ್ದೇವೆ, ಅದಕ್ಕೆ ನೂರಾರು ಕಾರಣಗಳಿವೆ. ಅಧಿಕಾರಕ್ಕಾಗಿ, ಹಣಕ್ಕಾಗಿ, ದಾರಿ ತಪ್ಪಿದ್ದೇವೆ, ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಈ ಮೂರರ ಸಾಲಿಗೆ ಪತ್ರಿಕಾರಂಗ ಸೇರಬಾರದು. ಪತ್ರಿಕಾರಂಗದ ಸ್ವಾತಂತ್ರ್ಯ ಉಳಿಸಿಕೊಂಡು ವೃತ್ತಿ ನಿಷ್ಠೆಯನ್ನು ಕಾಪಾಡಿ ಎಂದು ತಮ್ಮ ಅನುಭವದ ನುಡಿಗಳನ್ನು ನುಡಿದರು.
ನಂತರ ಹಿರಿಯ ಪತ್ರಕರ್ತರಾದ ಡಿ.ಎಚ್.ಕಂಬಳಿ ಮಾತನಾಡಿ, ಪತ್ರಿಕೆಯ ಕಷ್ಟ ನಷ್ಟದ ಸ್ವವಿವರವಾಗಿ ಮಾತನಾಡುತ್ತಾ ದೀಪದ ಬುಡದಲ್ಲಿ ಕತ್ತಲು ಕವಿದಹಾಗೆ ಪತ್ರಕರ್ತರು ಎಷ್ಟೇ ಸಾಮಾಜಿಕ ಜವಾಬ್ದಾರಿ ತೋರಿ ಬೆಳಕು ತೋರಿದರು ಕೂಡ ಅವರ ಬದುಕಿನಲ್ಲಿ ಕತ್ತಲು ಆವರಿಸಿದೆ. ವೃತ್ತಿ ನಿಷ್ಠೆ ತೋರಲು ಸಂಬಳ ಇಲ್ಲ. ಕನಿಷ್ಠ ದಿನಗೂಲಿ ನೌಕರರಿಗೆ ಇರುವಷ್ಟು ಸಂಬಳವಿಲ್ಲ. ಆದರೂ ಈ ಪತ್ರಿಕಾರಂಗ ಆಕರ್ಷಣೆಯಾಗುತ್ತಿದೆ. ಕಾರಣ ಪತ್ರಕರ್ತರು ಎಂಬುದು ಒಂದು ಗೌರವದ ಸ್ಥಾನ ಎಂಬ ಕಾರಣಕ್ಕಾಗಿಯಾದರೂ ಪತ್ರಿಕಾರಂಗಕ್ಕೆ ಬರುತ್ತಿದ್ದಾರೆ. ಯಾರೇ ಬಂದರೂ ಸಹ ಈ ಪತ್ರಿಕಾ ವೃತ್ತಿ ಧರ್ಮ ಕಾಪಾಡಬೇಕೆಂದು ಕಿವಿ ಮಾತು ಹೇಳಿದರು.
ತುರ್ವಿಹಾಳ ಅಮೋಘ ಸಿದ್ದೇಶ್ವರ ಮಠದ ಚಿದಾನಂದಯ್ಯ ಗುರುವಿನ್ ಮಾತನಾಡಿ, ಖಡ್ಗಕ್ಕಿಂತಲೂ ಅರಿತವಾದದ್ದು ಪೆನ್, ರವಿ ಕಾಣದ್ದನ್ನ ಕವಿ ಕಂಡ, ಕವಿ ಕಾಣದ್ದನ್ನ ಪತ್ರಕರ್ತರು ಕಂಡರು ಎಂಬ ನಾಣ್ಣುಡಿ ಇದೆ. ಇದು ನಿಜ ಕೂಡ ಲೇಖನಿಗಿಂತ ಹರಿತವಾದದು ಯಾವುದು ಇಲ್ಲ ಈ ದಿಶೆಯಲ್ಲಿ ಪತ್ರಿಕಾ ಧರ್ಮವನ್ನು ಉಳಿಸುವುದು ಮುಖ್ಯ, ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ, ಬದ್ದತೆ, ಕಾಪಾಡಿಕೊಳ್ಳಿ, ಮುಂದಿನ ದಿನಗಳಲ್ಲಿ ಸರ್ಕಾರ ಪತ್ರಕರ್ತರಿಗೆ ಒಂದಿಷ್ಟು ವೇತನ ಕೊಡುವಂತಾಗಲಿ ಎಂದರು.
ನಂತರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಯಾದ ಜಿಲ್ಲಾ ಉಪಾಧ್ಯಕ್ಷ ಅಶೋಕ ಬೆನ್ನೂರು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಶೇಖರ್ ಯರದಿಹಾಳ, ಮಹ್ಮದ್ ಮುಸ್ತಫಾ, ತಾಲೂಕು ಘಟಕಕ್ಕೆ ಅಧ್ಯಕ್ಷರಾದ ಶರಣಪ್ಪ ಕೆ.ಗೋನಾಳ, ಪ್ರಧಾನ ಕಾರ್ಯದರ್ಶಿ ಅಮರೇಶ ಅಲಬನೂರು, ಉಪನ್ಯಾಸಕರಾದ ಯಮನಪ್ಪ ಪವಾರ್, ದುರುಗೇಶ, ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಚಂದ್ರಶೇಖರ್ ಬೆನ್ನೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಎಚ್.ಕಂಬಳಿ, ಪ್ರಲ್ಹಾದ್ ಗುಡಿ, ಶ್ಯಾಮಕುಮಾರ, ವೀರೇಶ ಗಡ್ಡಿಮಾಳ, ಇವರಿಗೆ ಸನ್ಮಾನಿಸಿ ಗೌರವಿಸಿದರು.
ಈ ವೇಳೆ: ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್, ಎಂ.ದೊಡ್ಡಬಸವರಾಜ, ಈರೇಶ ಇಲ್ಲೂರು, ಸಿದ್ರಾಮೇಶ ಮನ್ನಾಪೂರು, ಸಿದ್ದೇಶ ಗುರಿಕಾರ, ಸೇರಿದಂತೆ ಅನೇಕರಿದ್ದರು.

