ರಾಯಚೂರು ಡಿಸೆಂಬರ್ 31 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಂಬಂಧಿಸಿದ ಅಧಿಕಾರಿಗಳು ಶ್ರಮಿಸಬೇಕು. ಅಲ್ಲದೆ ಹೆರಿಗೆ ಸಮಯದಲ್ಲಿ ತಾಯಂದಿರಿಗೆ ರಕ್ತ ಒದಗಿಸಲು ದಾನಿಗಳ ಸಂಪರ್ಕ ಸಾಧಿಸಿ ತಾಯಿಯ ಮರಣವಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸೆಂಬರ್ 30ರ ಮಂಗಳವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಸಂಘದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗರ್ಭಿಣಿ ಅವಧಿ ಸೇರಿದಂತೆ ಹೆರಿಗೆ ಸಂದರ್ಭದಲ್ಲಿ ಸುರಕ್ಷಿತ ಹೆರಿಗೆ ಕೈಗೊಳ್ಳಲು ಅಪರೂಪದ ರಕ್ತದ ಗುಂಪು ಹೊಂದಿದ ತಾಯಂದಿರಿಗೆ ರಕ್ತ ಒದಗಿಸಲು ದಾನಿಗಳ ಸಂಪರ್ಕ ಸಾಧಿಸುವುದರೊಂದಿಗೆ ಎಲ್ಲ ಸರಕಾರಿ ಹಾಗೂ ಖಾಸಗಿ ರಕ್ತ ಬ್ಯಾಂಕ್‌ಗಳಲ್ಲಿ ತಪ್ಪದೆ ರಕ್ತವನ್ನು ಸಂಗ್ರಹಿಸಲು ಜಿಲ್ಲೆಯಾದ್ಯಂತ ಅಧಿಕಾರಿಗಳು ನಿಗಾವಹಿಸಿ, ತಾಯಿ ಮರಣವಾಗದಂತೆ ಶ್ರಮಿಸಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ತಾಯಿಮರಣ ಗಣನಿಯವಾಗಿ ಕಡಿಮೆಯಾಗುತ್ತಿದ್ದು, ಕ್ಷೇತ್ರ ಮಟ್ಟದಲ್ಲಿ ವೈದ್ಯರಿಂದ ಹಿಡಿದು ಪಿಹೆಚ್‌ಸಿಓ, ಆಶಾ ಕಾರ್ಯಕರ್ತೆವರೆಗೆ ತಂಡವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾನ್ಯ ಮುಖ್ಯಮಂತ್ರಿಗಳು ಅವರ ನಿರ್ದೇಶನದಂತೆ ತಾಯಿ ಮರಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಬೇಕೆಂದರು.
ಗರ್ಭಿಣಿ ಎಂದು ತಿಳಿದ ದಿನದಂದ ಕಬ್ಬಿಣಾಂಶ ಪ್ರಮಾಣ ಕಡಿಮೆಯಾಗದಂತೆ ಕಬ್ಬಿಣಾಂಶ ಮಾತ್ರೆ, ಐರನ್ ಸುಕ್ರೋಸ್ ಒದಗಿಸುವುದು, ಅಗತ್ಯವಿದ್ದಲ್ಲಿ ರಕ್ತಪೂರಣ ಮಾಡಿಸಲು ಕ್ರಮವಹಿಸಬೇಕು. ಇತರೆ ಆರೋಗ್ಯ ಸಮಸ್ಯೆಗಳನ್ನು ಗುರ್ತಿಸಿ ಸೂಕ್ತವ ಚಿಕಿತ್ಸೆ ನೀಡಲು ತಂಡವಾಗಿ ಕಾರ್ಯನಿರ್ವಹಿಸಬೇಕೆಂದರು.
ಸಾಮಾನ್ಯವಾಗಿ ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಕಬ್ಬಿಣಾಂಶ ಕೊರತೆ, ಅಧಿಕ ರಕ್ತದೊತ್ತಡ, ಡಯಾಬಿಟಿಸ್, ತೂಕ ಪ್ರಮಾಣ ಸೇರಿದಂತೆ ಇತರೆ ಅಂಶಗಳು ಏರಿಳಿತಗೊಳ್ಳುತ್ತದೆ. ಇದಕ್ಕೆ ಸಕಾಲದಲ್ಲಿ ತಪಾಸಣೆ ಮಾಡಿಕೊಳ್ಳಲು ಸೂಚಿಸಬೇಕು. ಅಲ್ಲದೆ ಗರ್ಭಿಣಿಯರು ತಪಾಸಣೆಗೆ ಆಗಮಿಸುವ ಸಮಯದಲ್ಲಿ ಇವರಿಗೆ ದೇಹದಲ್ಲಿ ಯಾವ ಅಂಶಗಳ ಪ್ರಮಾಣ ಕಡಿಮೆ ಅಥವಾ ಹೆಚ್ಚು ಇದೆ. ಎಂಬುದನ್ನು ಖಾತ್ರಿ ಪಡಿಸಿಕೊಂಡು ವೈದ್ಯಾಧಿಕಾರಿಗಳು, ತಾಯಿ ಕಾರ್ಡ್ಗಳಲ್ಲಿ ನಮೂದಿಸಬೇಕು ಎಂದು ಸಂಬಂಧಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬಾಲ್ಯವಿವಾಹ ತಡೆಗೆ ಕ್ರಮ: ಬಾಲ್ಯ ವಿವಾಹ ಅದರಲ್ಲೂ ಹೆಣ್ಣುಮಕ್ಕಳ ಬಾಲ್ಯ ವಿವಾಹ ತಡೆಗೆ ಎಲ್ಲ ಮುಂಚೂಣಿ ಇಲಾಖೆಗಳು ಸಮನ್ವಯದೊಂದಿಗೆ ನಿರಂತರ ಜಾಗೃತಿ ನೀಡಬೇಕು. ಹಾಗೂ ಆರೋಗ್ಯ ಇಲಾಖೆಯು ತಜ್ಞ ವೈದ್ಯರ ಮೂಲಕ ತಪಾಸಣಾ ಶಿಬಿರವನ್ನು ಕಾಲ-ಕಾಲಕ್ಕೆ ಏರ್ಪಡಿಸಬೇಕು ಅಲ್ಲದೆ ಅಪೌಷ್ಟಿಕ ಮಕ್ಕಳ ತಡೆಗೆ ರಿಮ್ಸ್ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಇರುವ ಪೌಷ್ಟಿಕ ಪುನಶ್ಚೇತನ ಕೇಂದ್ರ (ಎನ್‌ಆರ್‌ಸಿ)ಗಳಿಗೆ ಮಕ್ಕಳನ್ನು 14 ದಿನಗಳವರೆಗೆ ಕಳುಹಿಸಲು ಪಾಲಕರಿಗೆ ತಿಳಿಹೇಳಬೇಕು ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ವಿಜಯ ಶಂಕರ, ಜಿಲ್ಲಾ ಆರ್.ಸಿ.ಹೆಚ್ ಡಾ.ನಂದೀತಾ ಎಮ್.ಎನ್., ಡಿಪಿಡಿಓ ಡಾ. ಚಂದ್ರಶೇಖರಯ್ಯ, ಡಿಎಸ್‌ಓ ಡಾ.ಗಣೇಶ್ ಕೆ., ಜಿಲ್ಲಾ ಎನ್‌ಪೋರ್ಸ್ಮೆಂಟ್ ಅಧಿಕಾರಿ ಡಾ.ಶಿವಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಇದ್ದರು.

