ರಾಯಚೂರು ಡಿಸೆಂಬರ್ 31 (ಕರ್ನಾಟಕ ವಾರ್ತೆ): ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಉದ್ಯೋಗ ಮೇಳಕ್ಕೆ ಬೇಕಾಗುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಭಾಗಿಯಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕರಾದ ಶರಣಬಸವರಾಜ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಡಿಸೆಂಬರ್ 31ರ ಬುಧವಾರ ದಂದು ನಗರದ ಜಿಲ್ಲಾ ಪಂಚಾಯತಿಯ ಜಲ ನಿರ್ಮಲ ಸಭಾಂಗಣದಲ್ಲಿ ಉದ್ಯೋಗ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೇಳವು ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಡಿಡಿಯು-ಜಿಕೆ ಯೋಜನೆಯಡಿ ಜಿಲ್ಲೆಗಳಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಬೇಕಾಗಿದೆ. ಉದ್ಯೋಗ ಮೇಳದ ಅವಧಿಯಲ್ಲಿ ಉದ್ಯೋಗದಾತ ಸುಮಾರು 75 ಸಂಸ್ಥೆಗಳನ್ನು ಆಹ್ವಾನಿಸಬೇಕಾಗಿದ್ದು, ಮೇಳದಲ್ಲಿ ಕನಿಷ್ಠ 1500 ಜನ ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ಕಡ್ಡಾಯವಾಗಿ ಕಲ್ಪಿಸುವ ಗುರಿಯನ್ನು ನಿಗಧಿಪಡಿಸಲಾಗಿದೆ. ಅಲ್ಲದೆ ಈ ಮೇಳದ ಎಲ್ಲಾ ಚಟುವಟಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ವ್ಯಾಪಕ ಪ್ರಚಾರ ಕಾರ್ಯಗಳನ್ನು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಳ್ಳಬೇಕು ಎಂದರು.
ಮೇಳಯು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಜನವರಿ ತಿಂಗಳಲ್ಲಿ ನಡೆಸಲಾಗುತ್ತಿದ್ದು, ಮೇಳದಲ್ಲಿ ಎಸ್‌ಎಸ್‌ಎಲ್‌ಸಿಯಿಂದ ಮೊದಲುಗೊಂಡು ಪಿಯುಸಿ, ಸಾಮಾನ್ಯ ಪದವಿ, ಡಿಪ್ಲೊಮಾ, ಐಟಿಐ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ಗಳನ್ನು ಕಲಿತವರಿಗೆ ಉದ್ಯೋಗಾವಕಾಶ ಕಲ್ಪಿಸಲು ವೇದಿಕೆ ಸಜ್ಜುಗೊಳಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 75 ಉದ್ಯೋಗದಾತರು (ಕಂಪೆನಿಗಳು) ಭಾಗವಹಿಸಲಿದ್ದು, ಆಸಕ್ತ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬೇಕು. ಮೇಳದಲ್ಲಿ ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಆಫರ್ ಲೆಟರ್ ಕೊಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಧಿಕಾರಿ ವಿಜಯಶಂಕರ್, ಸಿಡಾಕ್ ಜಂಟಿ ನಿರ್ದೇಶಕರಾದ ಜಿ.ಯು.ಹುದೇಡ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸೋಮಶೇಖರಪ್ಪ ಹೋಕ್ರಾಣಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರಾದ ರಾಜಕುಮಾರ್ ಪಾಟೀಲ್, ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಕಾರ್ಯದರ್ಶಿ ಜಂಬಣ್ಣ ಸೇರಿದಂತೆ ವಿವಿಧ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಸಭೆಯಲ್ಲಿ ಇದ್ದರು.

