ರಾಯಚೂರು ಡಿಸೆಂಬರ್ 31 (ಕರ್ನಾಟಕ ವಾರ್ತೆ): ವಿಕಲಚೇತನರು ಕೀಳರಿಮೆ ಬಿಟ್ಟು ತಮ್ಮ ಸವಾಲುಗಳನ್ನು ಸ್ವೀಕರಿಸಿ ಸಾಮರ್ಥ್ಯವನ್ನು ಅರಿತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸಲಹೆ ನೀಡಿದರು.
ಡಿಸೆಂಬರ್ 31ರ ಬುಧವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸಂಘ, ಸಂಸ್ಥೆ ಒಕ್ಕೂಟಗಳು ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ-2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇವರು ಎಲ್ಲರಿಗೂ ಆಳುವ ಶಕ್ತಿ ನೀಡಿದ್ದಾನೆ. ಪ್ರತಿಯೊಬ್ಬರಲ್ಲಿಯೂ ಅಗಾಧ ಶಕ್ತಿ, ಸಾಮರ್ಥ್ಯ, ಜ್ಞಾನ, ಕೌಶಲ್ಯ ಅಡಗಿರುತ್ತದೆ. ವಿಕಲಚೇತನರು ಸಕರಾತ್ಮಕವಾಗಿ ಆಲೋಚನೆ ಮಾಡಬೇಕು. ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯಬೇಕು. ಉನ್ನತ ಶಿಕ್ಷಣವನ್ನು ಪಡೆದು ಅಭಿವೃದ್ಧಿಯಾಗಬೇಕು. ವಿಕಲಚೇತನರು ವಿಶೇಷಚೇತನರು. ನಿಮ್ಮಲ್ಲಿ ವಿಶೇಷ ಸಾಮರ್ಥ್ಯ, ಜ್ಞಾನ, ಆಲೋಚನೆಯಿಂದ ಅಭಿವೃದ್ಧಿಯಾಗಬೇಕು ಎಂದು ಕಿವಿಮಾತು ಹೇಳಿದರು.
ವಿಕಲಚೇತನರು ಎಲ್ಲಾ ರಂಗದಲ್ಲಿ ಮುಂದೆ ಇದ್ದಾರೆ. ಸಾಧನೆಗೆ ಯಾವುದೇ ಅಂಗವಿಕಲತೆ ಅಡ್ಡಿಯಾಗದು. ಸಾಧನೆಗೆ ಸದೃಢ ಮನಸ್ಸು ಇರಬೇಕು. ಎಲ್ಲರೂ ಸೇರಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹ ವಿಕಲಚೇತನರಿಗೆ ತಲುಪಿಸೋಣ ಎಂದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್ ಅವರು ಮಾತನಾಡಿ, ಸರ್ಕಾರ ಯಾವಗ್ಲೂ ನಿಮ್ಮ ಪರ ಇರುತ್ತದೆ. ನೀವು ನಿರಾಶಕ್ತಿಗೊಳ್ಳದೆ. ನಿಮ್ಮ ಸಮಸ್ಯೆಗಳನ್ನು ನಮ್ಮತ್ರ ಹೇಳಿದ್ದಲ್ಲೇ ಸಮಸ್ಯೆಗಳನ್ನು ಬಗೆಹರಿಸಿ ನಾವು ಸದಾ ನಿಮ್ಮ ಪರ ಇರುತ್ತೇವೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಈಚೆಗೆ ನಡೆದ ಕ್ರೀಡೆಗಳಲ್ಲಿ ವಿಜೇತರಾದ ವಿಕಲಚೇತನರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಡಾ.ದಂಡಪ್ಪ ಬಿರಾದಾರ್, ಎಮ್.ಕೆ.ಭಂಡಾರಿ ಆಸ್ಪತ್ರೆಯ ವ್ಯವಸ್ಥಾಪಕರಾದ ರಿಯೋಜ್ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಮುಖಂಡರು ಇದ್ದರು.

Leave a Reply

Your email address will not be published. Required fields are marked *