ಸಿಂಧನೂರು ಬೀದಿ ವ್ಯಾಪಾರಿಗಳ ಜೀವನವನ್ನು ಧ್ವಂಸಗೊಳಿಸಿ, ಒಂದು ವರ್ಷವೇ ಗತಿಸಿ ಹೋಯಿತು.
ಕಳೆದ ವರ್ಷ 2024ರ ಡಿ.24 ರಂದು ನಗರದ ಸಾವಿರಾರು ವ್ಯಾಪಾರಿಗಳ ಬದುಕುವ ಹಕ್ಕುಗಳನ್ನು ಕಿತ್ತಿಕೊಳ್ಳಲಾಯಿತು. ಜಿಲ್ಲಾಧಿಕಾರಿ ನಿತೀಶ್, ತಾಲೂಕು ದಂಡಾಧಿಕಾರಿ ಅರುಣ್ ಕುಮಾರ್ ದೇಸಾಯಿ, ಹಾಗೂ ಪೌರಾಯುಕ್ತ ಮಂಜುನಾಥ ಗುಂಡೂರು, ಆದಿಯಾಗಿ ಸಂಬಂಧಿಸಿದ ಅಧಿಕಾರಿಗಳು ತಮ್ಮ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬಡವರ ಬದುಕನ್ನು ಬೀದಿಗೆ ತಳ್ಳಿದ್ದಾರೆಂದು ಕೃಷಿ ಬೆಲೆ ಆಯೋಗದ ಸದಸ್ಯರಾದ ಡಿ.ಎಚ್.ಪೂಜಾರ್ ಅಧಿಕಾರಿಗಳ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿಯಿಂದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಹೆದ್ದಾರಿ 30, ರಾಷ್ಟ್ರೀಯ ಹೆದ್ದಾರಿ150 ಎ, ಅತಿಕ್ರಮಣ ಮಾಡಿದ್ದ 300ಕ್ಕೂ ಹೆಚ್ಚಿನ ಬಿಲ್ಡಿಂಗ್ ಮಾಲೀಕರಿಗೆ ನೋಟಿಸ್ ಕೊಟ್ಟರೂ ಅವರ ಕಟ್ಟಡಗಳ ತಂಟೆಗೆ ಹೋಗಲಿಲ್ಲ ಪಿಡಬ್ಲ್ಯೂಡಿ ಅಧಿಕಾರಿಗಳು ಮಾರ್ಕ್ ಮಾಡಿದ್ದ ಯಾವ ಬಿಲ್ಡಿಂಗ್ ಗಳನ್ನು ಸಹ ಟಚ್ಚೆ ಮಾಡಲಿಲ್ಲ. ಸಿಂಧನೂರಿನಲ್ಲಿ ಬಡವರಿಗೊಂದು ಕಾನೂನು, ಬಲಿಷ್ಠರಿಗೊಂದು ಕಾನೂನು ಇದೆಯೇ? ಎಂದು ಪ್ರಶ್ನಿಸಿ
ಭೂ ಕಬಳಿಕೆ ನಿಷೇಧ ಕೋರ್ಟ್ ಮತ್ತು ಹೈಕೋರ್ಟ್ ಆದೇಶವನ್ನು ಬೀದಿ ವ್ಯಾಪಾರಿಗಳ ಮೇಲೆ ಅಸ್ತ್ರವಾಗಿ ಬಳಸಲಾಗಿದೆ.
ರಸ್ತೆ ಮಧ್ಯದಿಂದ ಎರಡು ಕಡೆ 21 ಮೀಟರ್ ರಸ್ತೆ ತೆರವುಗೊಳಿಸುವ ಹೈಕೋರ್ಟಿನ ಈ ಆದೇಶವನ್ನು ಧಿಕ್ಕರಿಸಿದ್ದಾರೆ. ಗಂಗಾವತಿ ರಸ್ತೆಯ ಬಲ ಭಾಗದಲ್ಲಿ 21 ಮೀಟರ್ ಬಿಟ್ಟು, ಹಾಕಿಕೊಂಡಿದ್ದ ಬೀದಿ ಬದಿ ವ್ಯಾಪಾರಸ್ಥರ ಶೆಡ್ ಗಳನ್ನು ಅಧಿಕಾರಿಗಳು ದೌರ್ಜನ್ಯದಿಂದ ಕಿತ್ತಿ ಎಸೆದರು. ಎಡ ಭಾಗದಲ್ಲಿ 15 ಮೀಟರ್ ಗಿಂತ ಕಡಿಮೆ ಹಂತರದಲ್ಲಿದ್ದ 70 ಕ್ಕೂ ಹೆಚ್ಚು
ಕಟ್ಟಡಗಳನ್ನು ಹಾಗೆ ಬಿಟ್ಟರು. ನಗರ ಪೋಲಿಸ್ ಠಾಣೆ ಪಕ್ಕದ ರಾಯಚೂರು ರಸ್ತೆಯಲ್ಲಿನ ಬಿಲ್ಡಿಂಗ್ ಗಳು 15 ಮೀಟರನಲ್ಲಿವೆ. ಕಳೆದ ಮೂರು ವರ್ಷಗಳ ಹಿಂದೆ ಈ ಮಳಿಗೆಗಳ ಮುಂಭಾಗವನ್ನು ಹೊಡೆದು ಹಾಕುವ ಕಾರ್ಯಾಚರಣೆ ಸಮಯದಲ್ಲಿ ಬುಲ್ಡೋಜರ್ ನ್ನು ಈಗಿರುವ ಶಾದಕರೇ ತಡೆದು ನಿಲ್ಲಿಸಿದ್ದರು.
ಇದರಿಂದಾಗಿ ಈ ಮಳಿಗೆಗಳ ಕಾರ್ಯಾಚರಣೆ ನಡೆಯಲಿಲ್ಲ ಎನ್ನುವ ಅನುಮಾನಗಳಿವೆ. ಪಿಡಬ್ಲ್ಯೂಡಿ ಅಧಿಕಾರಿಗಳು 21 ಮೀಟರನೊಳಗಿನ ನೂರಾರು ಕಟ್ಟಡಗಳಿಗೆ ಮಾರ್ಕ್ ಮಾಡಿದ್ದರು ಕೂಡ ಜೆಸಿಬಿಗಳು ಆ ಕಟ್ಟಡಗಳ ಕಡೆಗೆ ಹೋಗಲೇ ಇಲ್ಲ. ಕುಷ್ಟಗಿ ರಸ್ತೆಯ ಎಪಿಎಂಸಿ ಮುಂದುಗಡೆ 21 ಮೀಟರ್ ಬಿಟ್ಟು ಹಾಕಿದ್ದ ಶೆಡ್ ಮತ್ತು ಡಬ್ಬಾಗಳನ್ನು ಧ್ವಂಸಗೊಳಿಸಿದರು.
ಹೊಸ ಬಸ್ ನಿಲ್ದಾಣದ ಬಳಿ 21 ಮೀಟರ್ ಇದ್ದರೂ ಈ ಬಿಲ್ಡಿಂಗ್ ಗಳ ತಂಟೆಗಂತೂ ಯಾವ ಅಧಿಕಾರಿಗಳು ಹೋಗಲೇ ಇಲ್ಲ. ಕೆಪಿಟಿಸಿಎಲ್ ಮುಂದೆ ಅತಿಕ್ರಮಣ ಆದ ಕಟ್ಟಡಗಳನ್ನು ಮುಟ್ಟಲಿಲ್ಲ. ಜಿಲ್ಲಾಧಿಕಾರಿ ನಿತೀಶ್ ಕೆ, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ಪೌರಾಯುಕ್ತ ಮಂಜುನಾಥ ಗುಂಡೂರು ಸೇರಿದಂತೆ ಅನೇಕ ಅಧಿಕಾರಿಗಳು ರಸ್ತೆ ಅತಿಕ್ರಮಿಸಿದ ಬಿಲ್ಡಿಂಗ್ ಮಾಲೀಕರಿಂದ ಲಕ್ಷಾಂತರ ರೂ.ಮಾಮೂಲಿ ಪಡೆದ ಹಿನ್ನೆಲೆ, ದೊಡ್ಡ ದೊಡ್ಡ ಮಹಡಿಗಳು ಸುರಕ್ಷಿತವಾಗಿ ಉಳಿದುಕೊಂಡವು.
ಬಸ್ ನಿಲ್ದಾಣದ ಮುಂದಿನಿಂದ ಆದರ್ಶ ಕಾಲೋನಿಗೆ ಹೋಗುವ ಮೂರು ಒಳ ರಸ್ತೆಗಳನ್ನು ಅತಿಕ್ರಮಿಸಿ ಬಿಲ್ಡಿಂಗ್ ಕಟ್ಟಲಾಗಿದೆ. ಈ ಕಟ್ಟಡಗಳನ್ನು ಸಹ ತೆರವುಗೊಳಿಸಲು ದೂರು ಕೊಟ್ಟರೂ ಯಾವುದೇ ಕ್ರಮವಾಗಲಿಲ್ಲ. ಕಳೆದ ಒಂದು ವರ್ಷದಿಂದ ಬೀದಿ ವ್ಯಾಪಾರಿಗಳ ಗೋಳು ಕೇಳುವವರೇ ಇಲ್ಲ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಶಾಸಕರು, ಅಧಿಕಾರಿಗಳು, ಮಾತು ಉರಿಸಿಕೊಳ್ಳಲಿಲ್ಲ
ಆಳುವ ಪಕ್ಷಗಳ ಯಾವ ನಾಯಕರು ಈ ಬಡವರ ನೆರವಿಗೆ ಬರಲಿಲ್ಲ, ಬರುತ್ತಿಲ್ಲ, ಮುಂದೆಯೂ ಕೂಡ ಬರುವ ಭರವಸೆಯಂತೂ ಇಲ್ಲ.
ರಿಯಾಜ್ ತಂ.ವಲಿಸಾಬ್ ವಯಸ್ಸು 22. ಬಸವರಾಜ ತಂದೆ ನಾಗಪ್ಪ ವಯಸ್ಸು 59, ಶೌಕತ್ ಅಲಿ ವಯಸ್ಸು 30 ಈ ಮೂರು ಜನ ಬೀದಿ ವ್ಯಾಪಾರಿಗಳ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರು.
ಈ ಸಾವು, ತಾಲೂಕಾಡಳಿತ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿವೆ. ಹಾಗೆ ನೂರಾರು ವ್ಯಾಪಾರಿಗಳು ಸಿಂಧನೂರನ್ನು ಬಿಟ್ಟು ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಇನ್ನೂ ಕೆಲವರು, ಸಾಲಗಾರರ ಕಿರಿಕಿರಿ ತಾಳಲಾರದೆ, ಹೆದರಿ ಮನೆಬಿಟ್ಟು ಹೋಗಿದ್ದಾರೆ.
ನಗರಸಭೆಯ ಅಧಿಕಾರಿಗಳ ಸರ್ವೆ ಪ್ರಕಾರ 620 ಶೆಡ್, ಮತ್ತು ಡಬ್ಬಾ ಅಂಗಡಿಗಳು, ತಳ್ಳು ಬಂಡಿಗಳ ಲೆಕ್ಕವಿಲ್ಲ. ಒಟ್ಟು ಒಂದು ಸಾವಿರ ವ್ಯಾಪಾರಿಗಳು 5 ಸಾವಿರದಷ್ಟು ಕುಟುಂಬ ಅವಲಂಬಿತರ ಬದುಕನ್ನು ಬರ್ಬಾದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ 2026 ರ ಜನವರಿ 2 ಮತ್ತು 3 ರಂದು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆಂದು ಎಚ್ಚರಿಕೆ ನೀಡಿದರು.
ಈ ವೇಳೆ: ನಾರಾಯಣ ಬೆಳಗುರ್ಕಿ, ಚಿಟ್ಟಿಬಾಬು, ರಮೇಶ ಪಾಟೀಲ್, ಬಸವರಾಜ ಹಂಚಿನಾಳ, ಬಸವರಾಜ ಬಾದರ್ಲಿ, ಸೇರಿದಂತೆ ಅನೇಕ ಬೀದಿ ಬದಿ ವ್ಯಾಪಾರಸ್ಥರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು


