ಕವಿತಾಳ: ಡಿ 30 ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಪುಣ್ಯತಿಥಿ ಕವಿತಾಳ ಪೋಲಿಸ್ ಠಾಣೆಯಲ್ಲಿ ಆಚರಿಸಲಾಗಿದೆ. ಅನಾರೋಗ್ಯದಿಂದ ಹಠಾತ್ ನಿಧನರಾದ ಅವರು ತಮ್ಮ ಕರ್ತವ್ಯವನ್ನು ಅತ್ಯುತ್ತಮ ದಕ್ಷತೆ, ಶಿಸ್ತಿನೂಡಿ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದ ರಾಜ್ಯದ ಹೆಮ್ಮೆಯ ಪೊಲೀಸ್ ಅಧಿಕಾರಿಯಾಗಿದ್ದರು.

ಅತ್ಯುತ್ತಮ ವಿದ್ಯಾಭ್ಯಾಸ ಪಡೆದ ಹಾಗೂ ಜನರ ಕಲ್ಯಾಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಕೇವಲ ಪೊಲೀಸ್ ಇಲಾಖೆಗೆ ಮಾತ್ರವಲ್ಲ, ರಾಜ್ಯದ ಜನರಿಗೆ ಆದರ್ಶವಾಗಿದ್ದರು. ಆದರೆ ಇತ್ತೀಚೆಗೆ ರಾಜ್ಯದ ಅನೇಕ ಕಡೆ ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ನಕಾರಾತ್ಮಕ ಅಭಿಪ್ರಾಯ ಮೂಡುತ್ತಿರುವುದು ವಿಶೇಷವಾಗಿ ಚಿಂತಾಜನಕವಾಗಿದೆ. ಇಲಾಖೆಯೊಳಗಿನ ಭ್ರಷ್ಟಾಚಾರ, ಕೆಲವು ಅಧಿಕಾರಿಗಳ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು, ಅಮಾನತು ಅಥವಾ ಜೈಲುಪಾಲಾಗಿರುವ ಘಟನೆಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ, ಇಂದಿನ ಪೊಲೀಸ್ ಸಿಬ್ಬಂದಿಗೆ ಮಧುಕರ್ ಶೆಟ್ಟಿಯವರ ಆದರ್ಶ, ಶುದ್ಧಚರಿತ್ರೆ ಮತ್ತು ಕರ್ತವ್ಯಬದ್ಧತೆಯನ್ನು ನೆನಪಿಸುವುದು ಅಗತ್ಯ ಎಂದು ರಾಜ್ಯದ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಲಂಚಮುಕ್ತ, ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕಾಗಿ ಕಾರ್ಯನಿರತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೂಚಿಸಿದೆ.

ಪಕ್ಷದ ನೇತೃತ್ವದಲ್ಲಿ ಮಧುಕರ್ ಶೆಟ್ಟಿಯ ಭಾವಚಿತ್ರವನ್ನು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ವಿತರಿಸಿ, ಪೊಲೀಸ್ ಸಿಬ್ಬಂದಿಗೆ ಆದರ್ಶವಾಗಿ ಉಳಿಯುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ರನ್ನರ್, ಸುರೇಶ, ಹನುಮೇಶ, ಸಂತೋಷ ಕಲಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *