ರಾಯಚೂರು ಡಿಸೆಂಬರ್ 28 (ಕರ್ನಾಟಕ ವಾರ್ತೆ): ಜನರು ಪ್ರತಿನಿತ್ಯ ಮಾಧ್ಯಮಗಳನ್ನು ಮತ್ತು ಪತ್ರಕರ್ತರನ್ನು ಗಮನಿಸುತ್ತಾರೆ. ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರವು ಸಹ ಮಹತ್ವದ್ದಾಗಿದ್ದು, ಹಾಗಾಗಿ ಜನರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಮುಖಿಯಾಗಿ ಯೋಚಿಸಬೇಕು, ಕರ್ತವ್ಯ ನಿರ್ವಹಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಡಿಸೆಂಬರ್ 28ರ ಭಾನುವಾರ ದಂದು ರಾಯಚೂರು ರಿಪೋಟರ‍್ಸ್ ಗಿಲ್ಡ್, ಜಿಲ್ಲಾ ಮತ್ತು ಪ್ರಾದೇಶಿಕ ದಿನ ಪತ್ರಿಕೆಗಳ ಸಂಪಾದಕರ ಸಂಘ ರಾಯಚೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲಿ ಪತ್ರಿಕೆಗಳನ್ನು ನಡೆಸುವುದು ಕಷ್ಟವಾಗಿತ್ತು ಎಂಬುದನ್ನು ನಾವು ತಿಳಿದಿದ್ದೇವೆ. ಅಂತಹ ಪರಿಸ್ಥಿತಿ ಈಗಲೂ ಇದೆ ಎಂಬುದನ್ನು ಅರಿತು ರಾಜ್ಯ ಸರ್ಕಾರವು ಪತ್ರಕರ್ತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ರಾಯಚೂರು ಇತಿಹಾಸ ಗಮನಿಸಿದಾಗ ಸುದ್ದಿಮೂಲ, ರಾಯಚೂರು ವಾಣಿಯಂತಹ ಅನೇಕ ಪತ್ರಿಕೆಗಳು ಸಂಕಷ್ಟದ ಸ್ಥಿತಿಯಲ್ಲೂ ಉತ್ತಮವಾಗಿ ಪ್ರಕಟವಾಗಿ ಜಿಲ್ಲೆಯ ಅನೇಕ ಪತ್ರಕರ್ತರಿಗೆ ವೃತ್ತಿ ಬುನಾದಿಯನ್ನು ನೀಡಿವೆ. ಈ ಪತ್ರಿಕೆಗಳಿಂದ ಅನೇಕರು ಪತ್ರಕರ್ತರಾಗಿ ಹೊರಹೊಮ್ಮಿದ್ದನ್ನು ನೋಡಬಹುದಾಗಿದೆ. ಈ ಪತ್ರಿಕೆಗಳು ನಮಗೆ ಮಾರ್ಗದರ್ಶನ ಮಾಡಿವೆ. ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬೇಕೆಂದು ಸಲಹೆಗಳನ್ನು ನೀಡಿವೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಪತ್ರಕರ್ತರು ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಲ್ಲಿನ ಪತ್ರಕರ್ತರ ಬೇಡಿಕೆಯಂತೆ ಈಗಾಗಲೆ ಹೊಸ ಬಸ್ ನೀಡಿದ್ದೇವೆ. ಪತ್ರಕರ್ತರಿಗಾಗಿ ಪತ್ರಿಕಾ ಭವನದ ಸೌಕರ್ಯ ಕಲ್ಪಿಸಿದ್ದೇವೆ. ನಂತರ ಎರಡನೇ ಮಹಡಿ ನಿರ್ಮಾಣಕ್ಕೆ ಸಹ ಅನುದಾನ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.
ಕೆಲವು ಮಾಧ್ಯಮ ಸಂಸ್ಥೆಗಳು ದೊಡ್ಡ ದೊಡ್ಡ ಉದ್ಯಮಿಗಳ ಕೈ ಸೇರಿವೆ. ಕೆಲವು ಮಾಧ್ಯಮಗಳು ಉದ್ಯಮ ರೂಪ ಪಡೆದುಕೊಂಡಿದ್ದು ಈ ಮಧ್ಯೆಯೇ ಪತ್ರಕರ್ತರು ತಮ್ಮ ವೃತ್ತಿಗೆ ನಿಷ್ಠರಾಗಿ ನಡೆಯಬೇಕು. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಪತ್ರಕರ್ತರ ಪರಿಸ್ಥಿತಿ ಕಠಿಣವಾಗಿದ್ದರು ಸಹ ಇಲ್ಲಿನ ವರದಿಗಾರರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿನ ಪತ್ರಕರ್ತರು ಸಹ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಎಲ್ಲ ಪತ್ರಕರ್ತರ ಮೇಲೆ ನಮಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಈ ವೇಳೆ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಶಾಸಕಾಂಗ, ಕಾರ್ಯಾಂಗವನ್ನು ಕೆಲವೊಮ್ಮೆ ತಿದ್ದಿ ಸರಿಪಡಿಸುವ ಪತ್ರಿಕಾರಂಗದ ಇತಿಹಾಸ ಅತ್ಯಂತ ಅನನ್ಯವಾಗಿದೆ. ಮಹತ್ವದ ಪತ್ರಿಕಾರಂಗವನ್ನು ಪ್ರವೇಶಿಸುವ ಪ್ರತಿಯೊಬ್ಬರಿಗೂ ತರಬೇತಿಯ ಅವಶ್ಯಕತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಪತ್ರಿಕಾ ಕ್ಷೇತ್ರಕ್ಕೆ ಬರುತ್ತಿದ್ದು, ಅವರಿಗೆ ಕಾರ್ಯಾಗಾರ ಏರ್ಪಡಿಸಬೇಕು. ಯಾವುದೇ ವಿಷಯವನ್ನು ಬರೆಯುವಾಗ, ತೋರಿಸುವಾಗ ಅದರಲ್ಲಿ ಸತ್ಯವನ್ನು ಹುಡುಕಬೇಕು. ಅರೆಬರೆ ಮಾಹಿತಿ, ಮೂಲದೊಂದಿಗೆ ನಿರ್ಧಾರಕ್ಕೆ ಬರಬಾರದು. ಪತ್ರಕರ್ತರು ಅಧ್ಯಯನ ಮಾಡಬೇಕು. ಪತ್ರಕರ್ತರು ತಮ್ಮ ಜವಾಬ್ದಾರಿ ಅರಿತು ಆತ್ಮಸಾಕ್ಷಿಯಿಂದ ಕೆಲಸ ಮಾಡಿದಾಗ, ಪತ್ರಿಕಾ ವೃತ್ತಿಯ ಘನತೆ ಹೆಚ್ಚಲಿದೆ ಎಂದು ತಿಳಿಸಿದರು.
ಈ ವೇಳೆ ಕಲಬುರಗಿ ಪೀಠದ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬಿ ವೆಂಕಟಸಿಂಗ ಅವರು ಮಾತನಾಡಿ, ಕೆಲವು ದಶಕಗಳ ಹಿಂದೆ, ರಾಜ್ಯದಲ್ಲಿ ಮೈಸೂರು ಬಿಟ್ಟರೆ ಸ್ವತಂತ್ರವಾಗಿ ಪತ್ರಿಕಾ ಭವನವು ರಾಯಚೂರು ಜಿಲ್ಲೆಯಲ್ಲಿ ಮಾತ್ರ ಇತ್ತು. ರಾಯಚೂರು ರಿಪೋಟರ‍್ಸ್ ಗಿಲ್ಡ್ ಸಂಸ್ಥೆಯು ಅನೇಕ ದಶಕಗಳಿಂದ ನಿರಂತರ ಸೇವೆ ಮಾಡುತ್ತಿದೆ. ಈ ಮೂಲಕ ಪತ್ರಕರ್ತರಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ರಾಯಚೂರಿನ ಪತ್ರಕರ್ತರಿಗೆ ಬೇಕಾಗುವ ವಿವಿಧ ಸೌಲಭ್ಯ, ವಿವಿಧ ದತ್ತಿ ಪ್ರಶಸ್ತಿಗಳನ್ನು ನೀಡುತ್ತ ಪತ್ರಕರ್ತರನ್ನು ಪ್ರೋತ್ಸಾಹಿಸುತ್ತಿದೆ ಎಂದರು. ಕಲ್ಯಾಣ ಕರ್ನಾಟಕ ಭಾಗದಿಂದ ಮೊಟ್ಟಮೊದಲ ಬಾರಿಗೆ ಮಾಹಿತಿ ಆಯುಕ್ತರನ್ನಾಗಿ ತಮ್ಮನ್ನು ನೇಮಕ ಮಾಡಲಾಗಿದ್ದು, ತಮ್ಮ ಆಡಳಿತಾವಧಿಯಲ್ಲಿ ಗುರುತರ ಕಾರ್ಯ ಮಾಡುವುದಾಗಿ ಬಿ ವೆಂಕಟಸಿಂಗ ಹೇಳಿದರು.
ರಿಪೋಟರ‍್ಸ್ ಗಿಲ್ಡ್ ವೆಬ್‌ಸೈಟ್ ಲೋಕಾರ್ಪಣೆ: ಕಾರ್ಯಕ್ರಮದಲ್ಲಿ ಶಾಸಕರಾದ ಬಸನಗೌಡ ದದ್ದಲ್ ಅವರು ರಾಯಚೂರು ರಿಪೋಟರ‍್ಸ್ ಗಿಲ್ಡ್ ವೆಬ್‌ಸೈಟ್ ಲೋಕಾರ್ಪಣೆ ಮಾಡಿದರು. ಇದೆ ವೇಳೆ, ಬಿ ವೆಂಕಟಸಿಂಗ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ವಿವಿಧ ಪತ್ರಕರ್ತರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಪ್ರಜಾಪ್ರಸಿದ್ದ ದಿನಪತ್ರಿಕೆಯ ಹಿರಿಯ ಉಪ ಸಂಪಾದಕರಾದ ರಘುನಾಥರೆಡ್ಡಿ ಮನ್ಸಲಾಪೂರು, ಪ್ರಜಾವಾಣಿ ದಿನಪತ್ರಿಕೆಯ ರಾಯಚೂರು ಜಿಲ್ಲಾ ವರದಿಗಾರರಾದ ಚಂದ್ರಕಾಂತ ಮಸಾನಿ, ಪವರ್ ಟಿವಿ ಛಾಯಾಗ್ರಾಹಕರರಾದ ಅಬ್ದುಲ್ ಖಾದರ್, ಅಮೋಘ ಕೇಬಲ್ ವರದಿಗಾರರಾದ ಶ್ರೀನಿವಾಸ ಕೆ., ಪ್ರಜಾಪ್ರಸಿದ್ದ ದಿನಪತ್ರಿಕೆಯ ವರದಿಗಾರರಾದ ಬಿ. ರಾಜು ಅವರಿಗೆ ವಿವಿಧ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷರಾದ ವಿಜಯ್ ಜಾಗಟಗಲ್, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ., ವಿಜಯವಾಣಿ ಪತ್ರಿಕೆಯ ಗಂಗಾವತಿ ಸ್ಥಾನಿಕ ಸಂಪಾದಕರಾದ ಜಗನ್ನಾಥ ಆರ್.ದೇಸಾಯಿ, ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷರಾದ ಪಿ.ಚನ್ನಬಸವ ಬಾಗಲವಾಡ, ರಾಯಚೂರು ರಿಪೋಟರ‍್ಸ್ ಗಿಲ್ಡ್ನ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ ಹೂಗಾರ ಹಾಗೂ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಖಾನ್‌ಸಾಬ್ ಮೋಮಿನ್, ಡಿ.ಕೆ.ಕಿಸಾನ್ ಸೇರಿದಂತೆ ವಿವಿಧ ಗಣ್ಯರು ಇದ್ದರು.
ಸಣ್ಣ ವಿರೇಶ್ ನಿರೂಪಿಸಿದರು. ಸತ್ಯವಂತಿ ದೇಶಪಾಂಡೆ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *