ಅರಕೇರಾ :ಕಲುಷಿತ ನೀರು ಕುಡಿದು 40 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಹೆಗ್ಗಡದಿನ್ನಿ ಗ್ರಾಮದ ಹೊರಹೊಲಯದಲ್ಲಿ ಶನಿವಾರ ನಡೆದಿದೆ. ಮಲ್ಲೆನಾಯಕನದೊಡ್ಡಿ ಗ್ರಾಮದ ಭೀಮಯ್ಯ ನಾಯಕ ತಂದೆ ಹನುಮಂತರಾಯ ಇವರಿಗೆ ಸೇರಿದ 35 ಕುರಿಗಳು ಹಾಗೂ ಕೊತ್ತದೊಡ್ಡಿ ಗ್ರಾಮದ ಲಕ್ಷ್ಮಣ ತಂದೆ ಸಾಬಗೌಡ ಇವರಿಗೆ ಸೇರಿದ 5 ಕುರಿಗಳು ಒಟ್ಟು 40 ಕುರಿಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸುಮಾರು 250 ಕುರಿಗಳನ್ನು ಮೇಯಿಸಲು ಕರೆದುಕೊಂಡು ಹೋಗಿದ್ದರು. ಹಳ್ಳದ ನೀರಿನೊಂದಿಗೆ ಕಲುಷಿತಗೊಂಡ ನೀರು ಬೆರೆತ್ತಿದ್ದು.ಅದೇ ನೀರನ್ನು ಕುರಿಗಳು ಕುಡಿದು ಸ್ಥಳದಲ್ಲೇ ಸಾವನ್ನಪ್ಪಿವೆ. ಸ್ಥಳಕ್ಕಾಗಿಮಿಸಿದ ಪಶು ವೈದ್ಯರು ಇನ್ನೂ ಅಸ್ವಸ್ಥಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ತಿಳಿದ ಶಾಸಕಿ. ಕರೆಮ್ಮ ಜಿ. ನಾಯಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುರಿಗಳ ಮಾಲಿಕನಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸಿಗುವ ಪರಿಹಾರವನ್ನು ದೊರಕಿಸಿಕೊಡುವ ಭರವಸೆ ನೀಡಿದರು. ಕಂದಾಯ ಇಲಾಖೆ ಹಾಗೂ ಪಶು ಇಲಾಖೆಯ ಅಧಿಕಾರಿ ಸಿಬ್ಬಂದಿ ಇದ್ದರು.

