ಮಾನ್ವಿ : ಪಟ್ಟಣದ ಬಿ.ವಿ.ಆರ್ ಇ-ಟೆಕ್ನೋ ಶಾಲೆಯಲ್ಲಿ ಶ್ರೀ ಬಸವ ಸೇವಾ ಪ್ರತಿಷ್ಠಾನ ಹಾಗೂ ಸುದ್ದಿಮೂಲ ದಿನಪತ್ರಿಕೆ ರಾಯಚೂರು, ಬಸವ ಕೇಂದ್ರ ಮಾನ್ವಿ, ಶರಣ ಸಾಹಿತ್ಯ ಪರಿಷತ್ತು ಮಾನ್ವಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿ ಹಾಗೂ ತಾಲೂಕಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮಾನ್ವಿ ಇವರ ಸಂಯುಕ್ತ ಆಶ್ರಯದಲ್ಲಿ ಬಸವ ಗೀತೆ – ಸತ್ಯಸಂವಾದ (9 ಸಂಪುಟಗಳ ಗುಚ್ಛ) ಗ್ರಂಥ ಲೋಕಾರ್ಪಣಾ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರಾದ ಬಿ.ಜಿ. ಹುಲಿ ಅವರು ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಪುಸ್ತಕ ಕುರಿತು ಮಾತನಾಡುತ್ತಾ, ಪುಸ್ತಕದ ಓದು ಮಸ್ತಕದ ಜ್ಞಾನವನ್ನು ವೃದ್ಧಿಸುತ್ತದೆ. ಮೊದಲ ಹಾಗೂ ಎರಡನೇ ಸಂಪುಟಗಳು ಈಗಾಗಲೇ ಲೋಕಾರ್ಪಣೆಯಾಗಿದ್ದರೂ, ಎಲ್ಲಾ ಒಂಬತ್ತು ಸಂಪುಟಗಳನ್ನು ಮಾನ್ವಿಯಲ್ಲಿ ಲೋಕಾರ್ಪಣೆ ಮಾಡುವ ಮೂಲಕ ಇಲ್ಲಿನ ಜನರಿಗೆ ಬಸವ ಚಿಂತನೆಯ ಜ್ಞಾನ ತಲುಪಲಿ ಎಂಬ ಉದ್ದೇಶವಿದೆ ಎಂದರು. ಒಂಬತ್ತು ಸಂಪುಟಗಳಿಗೆ ಒಂಬತ್ತು ಗಣ್ಯರು ಮುನ್ನುಡಿ ಬರೆದಿದ್ದು, ಮೊದಲ ಸಂಪುಟಕ್ಕೆ ತಾವು ಮುನ್ನುಡಿ ಬರೆದಿರುವುದಾಗಿ ತಿಳಿಸಿದರು. ಉಳಿದ ಎಂಟು ಸಂಪುಟಗಳಿಗೆ ಹಿರಿಯ ಸಾಹಿತಿಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವವರು ಮುನ್ನುಡಿ ಬರೆದಿರುವುದರಿಂದ ಈ ಗ್ರಂಥದ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಣಾಧಿಕಾರಿಗಳಾದ ಡಿ.ಜಿ. ಕರ್ಕಿಹಳ್ಳಿ ಅವರು ಉದ್ಘಾಟಿಸಿದರು.

ಶರಣ ಸಾಹಿತ್ಯ ಪರಿಷತ್ತು ಮಾನ್ವಿಯ ಅಧ್ಯಕ್ಷರಾದ ಕೆ.ಈ. ನರಸಿಂಹ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ, ಬಸವ ಗೀತೆ – ಸತ್ಯಸಂವಾದದ ಒಂಬತ್ತು ಸಂಪುಟಗಳು ಅಷ್ಟೊಂದು ಆಳವಾದ ವಿಷಯವನ್ನು ಒಳಗೊಂಡಿದ್ದು, ಪ್ರತಿಯೊಂದು ಸಂಪುಟಕ್ಕೂ ಡಾಕ್ಟರೇಟ್ ಮಾಡಬಹುದಾದಷ್ಟು ಸಂಶೋಧನಾ ಮೌಲ್ಯವಿದೆ ಎಂದರು. ಬಸವ ಗೀತೆಯಲ್ಲಿ ಕೇವಲ ಬಸವಣ್ಣನಷ್ಟೇ ಅಲ್ಲ ಕೃಷ್ಣ, ಪೈಗಂಬರ ಹಾಗೂ ಯೇಸುಕ್ರಿಸ್ತನಂತಹ ಮಹಾತ್ಮರ ತತ್ತ್ವವೂ ಕಾಣಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಗೌರವಾಧ್ಯಕ್ಷರಾದ ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ಅವರು ವಹಿಸಿದ್ದರು.

ಬಸವ ಗೀತೆ – ಸತ್ಯಸಂವಾದ ಗ್ರಂಥದ ಲೇಖಕರಾದ ಹಾಗೂ ಸುದ್ದಿಮೂಲ ದಿನಪತ್ರಿಕೆಯ ಸಂಪಾದಕರಾದ ಬಸವರಾಜ ಸ್ವಾಮಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ.ಎಂ. ರಂಗಪ್ಪ ಮೇದಾ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸವ ನೀರಮಾನ್ವಿ, ತಾಲೂಕಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ರಾಜಾ ಸುಭಾಷಚಂದ್ರ ನಾಯಕ, ನಿಕಟಪೂರ್ವ ಅಧ್ಯಕ್ಷರಾದ ಹೆಚ್. ಶರ್ಪುದ್ದೀನ್ ಪೋತ್ನಾಳ್, ಕಸಾಪ ಮಾಜಿ ಅಧ್ಯಕ್ಷರಾದ ಮೂಕಪ್ಪ ಕಟ್ಟಿಮನಿ, ಬಿ.ವಿ.ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ.ವಿ. ರೆಡ್ಡಿ, ಸುದ್ದಿಮೂಲ ವರದಿಗಾರರಾದ ಪಿ. ಪರಮೇಶ ಸೇರಿದಂತೆ ಸಾಹಿತಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *