ರಾಯಚೂರು ಅಂಗನವಾಡಿ ಕಾರ್ಯಕರ್ತರು ಸಮಾಜದ ನೆಲಮಟ್ಟದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಭದ್ರತೆಯನ್ನು ಸೈನಿಕರಂತೆ ಕಾಯುತ್ತಿದ್ದಾರೆ. ಸರ್ಕಾರದ ಯಾವುದೇ ಯೋಜನೆ ಅಥವಾ ಪ್ರಾಜೆಕ್ಟ್ ಯಶಸ್ವಿ ಆಗಬೇಕಾದರೆ, ಅದರ ನೆಲಮಟ್ಟದ ಜಾರಿಗೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಂಗನವಾಡಿ ಫೆಡರೇಶನ್ ಜಿಲ್ಲಾ ಗೌರವಾಧ್ಯಕ್ಷ ಡಿ.ಎಚ್.ಕಂಬಳಿ ಹೇಳಿದರು.
ನಗರದ ಎಪಿಎಂಸಿ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಹಿರಿಯ ವಯಸ್ಸಿನ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ, ಆಧುನಿಕ ತಂತ್ರಜ್ಞಾನದಲ್ಲಿ ಹಿಂದುಳಿದಿದ್ದರೂ ಸಹ, ಸ್ಮಾರ್ಟ್‌ಫೋನ್, ಆನ್‌ಲೈನ್ ಡಿಜಿಟಲ್, ದಾಖಲೆಗಳಂತಹ ಹೊಸ ವ್ಯವಸ್ಥೆಗಳಿಗೆ ಹೊಂದಿಕೊಳ್ಳಲು ಸಾಕಷ್ಟು ಸವಾಲುಗಳಿದ್ದರೂ, ತಮ್ಮ ಕರ್ತವ್ಯದಲ್ಲಿ ಯಾವುದೇ ಕೊರತೆ ಬಾರದಂತೆ ಅವರು ಶ್ರಮಿಸುತ್ತಿದ್ದಾರೆ.
ನಮಗೆ ಸ್ವಾಭಿಮಾನ ತಂದುಕೊಟ್ಟಿದ್ದು ಸಂಘಟನೆ, ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು, ನಮ್ಮ ಧ್ವನಿಯನ್ನು ಗಟ್ಟಿಯಾಗಿ ಒಗ್ಗೂಡಿಸಬೇಕು ಹಾಗೂ ಇನ್ನಷ್ಟು ಬಲಿಷ್ಠರಾಗಬೇಕು ಎಂದು ಕಾರ್ಯಕರ್ತೆಯರಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಬಾಷುಮಿಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿ, ಕರ್ನಾಟಕ ಜನಶಕ್ತಿ ಮುಖಂಡ ಬಸವರಾಜ ಬಾದರ್ಲಿ, ಉಪನ್ಯಾಸಕ, ಹಿರಿಯ ಹೋರಾಟಗಾರರು ಚಂದ್ರಶೇಖರ್ ಗೊರೆಬಾಳ, ಗಿರಿಜಮ್ಮ, ಸಿಡಿಪಿಒ ಅಶೋಕ ತುರ್ವಿಹಾಳ, ಸುಲೋಚನಾ, ಸಂಗಯ್ಯಸ್ವಾಮಿ, ರತ್ನಮ್ಮ, ಹಾಗೂ
ಇನ್ನಿತರರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

