ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವ ಹಿನ್ನೆಲೆ ಭೀಮ್ ಆರ್ಮಿ (ಭಾರತ ಏಕತಾ ಮಿಷನ್) ತಾಲೂಕು ಸಮಿತಿ ವತಿಯಿಂದ ಡಿಸೆಂಬರ್ 31ರಂದು ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಧುಮತಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 28 ಸಾವಿರ ಸೈನಿಕರನ್ನು ಕೇವಲ 500 ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ ಭೀಮಾ ಕೋರೆಗಾಂವ್ ಆಗಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು-ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸಿದ ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟಕ್ಕೆ ಇದು ಸಾಕ್ಷಿಯಾಗಿದೆ.
ಅಷ್ಟೇ ಅಲ್ಲದೇ ಶೋಷಿತರು, ಮೇಲ್ಜಾತಿ ಶೋಷಕರ ಶೋಷಣೆಯ ನಡವಳಿಕೆ ವಿರುದ್ಧ ಯುದ್ಧವನ್ನು ಘೋಷಿಸಿ, ಗೆಲುವು ಸಾಧಿಸಿದಂತ ದಿನವೇ ಭೀಮಾ ಕೋರೆಗಾಂವ್ ವಿಜಯೋತ್ಸವವಾಗಿದೆ. ಭೀಮಾ ತೀರದಲ್ಲಿ ಕಾಳಗ ನಡೆದಿದ್ದರಿಂದ ಇತಿಹಾಸದಲ್ಲಿ ಭೀಮಾ ಕೋರೇಗಾಂವ್ ಯುದ್ಧವೆಂದೇ ಪ್ರಸಿದ್ಧಿ ಪಡೆದಿದೆ. ನಗರದ ಎಪಿಎಂಸಿಯಿಂದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿವರೆಗೆ ಭೀಮ್ ಆರ್ಮಿ ಕಾರ್ಯಕರ್ತರು ಸೇರಿದಂತೆ ಮುಖಂಡರಿಂದ ಪಂಜಿನ ಮೆರವಣಿಗೆ ನಡೆಯಲಿದೆ. ನಂತರ ಮಹಾತ್ಮಗಾಂಧಿ ವೃತ್ತದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು.
ಈ ವಿಜಯೋತ್ಸವದಲ್ಲಿ ವಿದ್ಯಾರ್ಥಿ ಯುವಜನರು, ವಿವಿಧ ಜನಪರ ಸಂಘಟನೆಗಳ ಮುಖಂಡರು, ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಲು ಪ್ರಮೀಣ್‌ಕುಮಾರ ಧುಮತಿ ಮನವಿ ಮಾಡಿದರು. ಈ ಸುದ್ದಿಗೋಷ್ಠಿಯಲ್ಲಿ ಉಮೇಶ ಸುಕಾಲಪೇಟೆ, ಪರಶುರಾಮ, ಬೀರಪ್ಪ, ಪ್ರದೀಪ್, ವೀರಭದ್ರಯ್ಯ ಇದ್ದರು.

