ಸರ್ಕಾರಿ ಸೇವೆಯನ್ನು ಕೇವಲ ಕರ್ತವ್ಯವೆಂದು ಭಾವಿಸದೇ, ಅದನ್ನೊಂದು ಸಾಮಾಜಿಕ ಜವಾಬ್ದಾರಿಯಾಗಿ ಸ್ವೀಕರಿಸಿದಾಗ ಎಂತಹ ಅದ್ಭುತ ಬದಲಾವಣೆ ತರಬಹುದು ಎಂಬುದಕ್ಕೆ ಶ್ರೀ ಮೊಹಮ್ಮದ್ ಅಬ್ದುಲ್ ಯೂನುಸ್ ಅವರೇ ಸಾಕ್ಷಿ. ಮಾನವಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಆರು ವರ್ಷಗಳ ಕಾಲ ಶಿಕ್ಷಣ ಸಂಯೋಜಕರಾಗಿ ಇವರು ಸಲ್ಲಿಸಿದ ಸೇವೆ ಇಡೀ ಜಿಲ್ಲೆಗೆ ಮಾದರಿಯಾಗಿದೆ.
ಯೂನುಸ್ ಅವರ ಸಾಧನೆಯ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಸಮರ್ಥ ಮಾರ್ಗದರ್ಶನ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳ ಪ್ರೋತ್ಸಾಹ ದೊಡ್ಡದಿದೆ. ಇಲಾಖೆ ನೀಡುವ ಜವಾಬ್ದಾರಿಯನ್ನು ಅತ್ಯಂತ ಸೃಜನಶೀಲವಾಗಿ ನಿಭಾಯಿಸುತ್ತಿದ್ದ ಇವರು, ಪ್ರತಿಯೊಂದು ಹಂತದಲ್ಲೂ ಮುಖ್ಯಗುರುಗಳು ಮತ್ತು ಸಹೋದ್ಯೋಗಿ ಶಿಕ್ಷಕರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತಿದ್ದರು. ಶಿಕ್ಷಕ ಸ್ನೇಹಿ ಅಧಿಕಾರಿಯಾಗಿ ಇವರ ಕಾರ್ಯ ಇಂದಿಗೂ ಶಿಕ್ಷಕರ ವಲಯದಲ್ಲಿ ಹಸಿರಾಗಿದೆ.
ಒಬ್ಬ ಅಧಿಕಾರಿಯ ಸಾಧನೆಯನ್ನು ಅವರ ಹುದ್ದೆಗಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳು ಅವರಿಗೆ ನೀಡುವ ಪ್ರೀತಿಯ ಹೆಸರುಗಳು ಅಳೆಯುತ್ತವೆ. ಮಾನವಿ ತಾಲೂಕಿನಲ್ಲಿ ಶ್ರೀ ಮೊಹಮ್ಮದ್ ಅಬ್ದುಲ್ ಯೂನುಸ್ ಎನ್ನುವ ಹೆಸರಿಗಿಂತಲೂ, ವಿದ್ಯಾರ್ಥಿಗಳ ಪಾಲಿಗೆ ಅವರು ‘ಎನ್‌ ಎಂ ಎಂ ಎಸ್‌ ಸರ್’ ಮತ್ತು ‘ಟಾರ್ಗೆಟ್ 625 ಸರ್’ ಎಂದೇ ಚಿರಪರಿಚಿತ.
ವಿದ್ಯಾರ್ಥಿಗಳ ನೆಚ್ಚಿನ ‘NMMS’ ಮತ್ತು ‘Target-625’ ಸರ್
NMMS ನೋಡಲ್ ಅಧಿಕಾರಿ: 8ನೇ ತರಗತಿ ಮಕ್ಕಳಿಗೆ ₹48,000 ವಿದ್ಯಾರ್ಥಿ ವೇತನ ತಂದುಕೊಡುವ NMMS ಪರೀಕ್ಷೆಗಾಗಿ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದರಿಂದ, ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ.
SSLC ಪ್ರೇರಕ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಡಲ್ ಅಧಿಕಾರಿಯಾಗಿ ಇವರು ಸ್ವತಃ ಸಿದ್ಧಪಡಿಸಿದ ‘ಟಾರ್ಗೆಟ್-625’ ಪಿಪಿಟಿ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಇದರ ಫಲವಾಗಿ ತಾಲೂಕಿನ ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ದಾಖಲೆ ಬರೆದಿದ್ದಾರೆ.
ದಾನಿಗಳ ನೆರವಿನಿಂದ ಶಾಲೆಗಳ ಮುಖಪುಟವನ್ನೇ ಬದಲಿಸಿದ ಇವರು:
ನಗು ಫೌಂಡೇಶನ್: ಮಾಡಗಿರಿ ಶಾಲೆಗೆ 1.5 ಲಕ್ಷ ವೆಚ್ಚದ ಬಾಲಕಿಯರ ಶೌಚಾಲಯ ಹಾಗೂ 10ಕ್ಕೂ ಹೆಚ್ಚು ಶಾಲೆಗಳಿಗೆ ಕ್ರೀಡಾ ಸಾಮಗ್ರಿ.
ಯೂತ್ ಫಾರ್ ಸೇವಾ: ಆರು ಶಾಲೆಗಳ ಮಕ್ಕಳಿಗೆ ಎಜುಕೇಶನ್ ಕಿಟ್ ಮತ್ತು ಶಿಕ್ಷಕರಿಗೆ ವಿಶೇಷ ತರಬೇತಿ.
ಬ್ಲಾಕ್ ಕಲರ್ ಫಾರ್ ಬ್ರೈಟ್ ಫ್ಯೂಚರ್: ಕಲ್ಲೂರು, ಮಾನವಿ ಮತ್ತು ಪೋತ್ನಾಳ ವಲಯದ ಎಲ್ಲಾ ಶಾಲೆಗಳ ಕಪ್ಪು ಹಲಗೆಗಳಿಗೆ ದಾನಿಗಳ ನೆರವಿನಿಂದ ಬಣ್ಣ ಬಳಿಯುವ ವಿನೂತನ ಕಾರ್ಯ.
ದತ್ತು ಯೋಜನೆ: ಕೃಷ್ಣನಗರ ಕಲ್ಲೂರು ಶಾಲೆಯನ್ನು ದತ್ತು ಪಡೆದು ಖಾಸಗಿ ಶಾಲೆಗಳಿಗೆ ಸವಾಲು ಹಾಕುವಂತೆ ಅಭಿವೃದ್ಧಿಪಡಿಸಿದ್ದು ಇವರ ಅತಿದೊಡ್ಡ ಸಾಧನೆ.
ಯೂನುಸ್ ಅವರ ಕಾರ್ಯವೈಖರಿಯಿಂದ ಪ್ರೇರಣೆಗೊಂಡ ಮಾನವಿಯ ಗಫೋರ್ ಮೆಮೋರಿಯಲ್ ಎಜ್ಯುಕೇಷನಲ್ ಟ್ರಸ್ಟ್, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ.
ಕನ್ನಡ ಕಲಿಕಾ ಕ್ರಾಂತಿ: ಈ ಟ್ರಸ್ಟ್ ಹಾಗೂ ರಾಯಚೂರಿನ ಕಲಾಂ ಎಜ್ಯುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ‘ನನ್ನ ಶಾಲೆ ನನ್ನ ಕೊಡುಗೆ’ ಕಾರ್ಯಕ್ರಮದಡಿಯಲ್ಲಿ ಕಳೆದ ಮೂರು ವರ್ಷಗಳಿಂದ ‘ವಿದ್ಯಾರ್ಥಿಗಳಿಗೆ ಬನ್ನಿ ಕನ್ನಡ ಕಲಿಯೋಣ’ ಎಂಬ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಯೋಜನೆಗಾಗಿ ಪ್ರತ್ಯೇಕ ಶಿಕ್ಷಕರನ್ನು ನೇಮಿಸಿ, ಅವರಿಗೆ ಟ್ರಸ್ಟ್ ವತಿಯಿಂದಲೇ ವೇತನ ನೀಡಿ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಮೂಡಿಸಿರುವುದು ಇವರ ದೂರದೃಷ್ಟಿಗೆ ಸಾಕ್ಷಿ.
ಪ್ರತಿಭಾ ಪುರಸ್ಕಾರ: ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕಳೆದ ನಾಲ್ಕು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಈ ಟ್ರಸ್ಟ್ ಮೂಲಕ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
‘ಅಕ್ಷರ ಟ್ರೋಫಿ’ ಕ್ರಿಕೆಟ್ ಟೂರ್ನಿ: ಶಿಕ್ಷಕರಲ್ಲಿ ಕ್ರೀಡಾ ಚೈತನ್ಯ
ಯೂನುಸ್ ಅವರು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಶಿಕ್ಷಕರ ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ರಜೆಯ ಅವಧಿಯಲ್ಲಿ ‘ಅಕ್ಷರ ಟ್ರೋಫಿ’ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದ್ದರು. ಇದು ಶಿಕ್ಷಕರ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಶಿಕ್ಷಕರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗೆ ದೊಡ್ಡ ವೇದಿಕೆಯನ್ನು ಒದಗಿಸಿತು. ಈ ಮೂಲಕ ಶಿಕ್ಷಕರಲ್ಲಿ ಸ್ನೇಹಭಾವ ಮತ್ತು ಒಗ್ಗಟ್ಟನ್ನು ಮೂಡಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.
ರಾಷ್ಟ್ರಮಟ್ಟದ ಗೌರವ
ಪರಿಶಿಷ್ಟ ಪಂಗಡ ಇಲಾಖೆಯ ‘ಆದಿ ಕರ್ಮಯೋಗಿ’ ಅಭಿಯಾನದ ಜಿಲ್ಲಾ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ನವದೆಹಲಿಯಲ್ಲಿ ನಡೆದ ರಾಷ್ಟ್ರಪತಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇವರ 17 ವರ್ಷಗಳ ಸೇವೆಗೆ ಸಂದ ಗೌರವವಾಗಿದೆ. ಪ್ರಸ್ತುತ ಯರಮರಸ್ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಶೈಕ್ಷಣಿಕ ಪಯಣ ಯಶಸ್ವಿಯಾಗಿ ಮುಂದುವರಿಯಲಿ.

Leave a Reply

Your email address will not be published. Required fields are marked *