ಸಿಂಧನೂರು : ಡಿ 26 ನಗರದ ಕಾರುಣ್ಯ ಪುಣ್ಯಾಶ್ರಮದಲ್ಲಿ ಕರುಣಾಮೂರ್ತಿ ಕ್ರಿಸ್ತ ಯೇಸುವಿನ ಜಯಂತಿಯನ್ನು ಭಕ್ತಿಭಾವ ಹಾಗೂ ಸೇವಾಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆರ್.ಎಚ್. ನಂಬರ್ ವನ್, ಬರ್ಮಾ ಕ್ಯಾಂಪ್ ನಿವಾಸಿಗಳಾದ ದೀಪಕ್ ನಿನಸಿಯವರ ಕುಟುಂಬ ಹಾಗೂ ಸಿರಿಲ್–ನಿರ್ಮಲಾ ಲಾಜರ್ ಕುಟುಂಬದವರು ಕಾರುಣ್ಯ ಆಶ್ರಮಕ್ಕೆ ಭೇಟಿ ನೀಡಿ ಕ್ರಿಸ್ತ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕ್ರಿಸ್ತ ಜಯಂತಿಯ ಅಂಗವಾಗಿ ಆಶ್ರಮದಲ್ಲಿ ನೆಲೆಸಿರುವ ಹಿರಿಯ ಜೀವಿಗಳೊಂದಿಗೆ ಕೇಕ್ ಕತ್ತರಿಸಿ ಹಂಚುವ ಮೂಲಕ ಸಂಭ್ರಮಿಸಲಾಯಿತು. ಜೊತೆಗೆ ಎಲ್ಲರಿಗೂ ಕೇಕ್, ಬಾಳೆಹಣ್ಣು, ಸಣ್ಣಪುಟ್ಟ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳು ಹಾಗೂ ಅಕ್ಕಿಯನ್ನು ವಿತರಿಸುವ ಮೂಲಕ ಮಾನವೀಯ ಸೇವೆ ಸಲ್ಲಿಸಲಾಯಿತು. ಹಿರಿಯ ನಾಗರಿಕರೊಂದಿಗೆ ಹಬ್ಬವನ್ನು ಆಚರಿಸುವ ಮೂಲಕ ಕ್ರಿಸ್ತ ಯೇಸುವಿನ ಪ್ರೀತಿ, ದಯೆ ಮತ್ತು ಕರುಣೆಯ ಸಂದೇಶವನ್ನು ಕಾರ್ಯರೂಪದಲ್ಲಿ ತೋರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚನ್ನಬಸಯ್ಯ ಸ್ವಾಮೀಜಿಯವರು, ಕಾರುಣ್ಯ ಆಶ್ರಮದಂತಹ ಪವಿತ್ರ ಸೇವಾ ಕೇಂದ್ರದಲ್ಲಿ ಕ್ರಿಸ್ತ ಜಯಂತಿಯನ್ನು ಆಚರಿಸುವುದು ಅತ್ಯಂತ ಅರ್ಥಗರ್ಭಿತ ಹಾಗೂ ಸಂತೋಷದಾಯಕವಾಗಿದೆ ಎಂದು ತಿಳಿಸಿದರು. ಕರುಣಾಮೂರ್ತಿ ಯೇಸು ಕ್ರಿಸ್ತನ ಸಂದೇಶವು ಸೇವೆ ಮತ್ತು ಸಹಾನುಭೂತಿಯಲ್ಲಿ ಅಡಗಿದ್ದು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ಪ್ರಾಚಾರ್ಯರಾದ ಸಿರಿಲ್, ಕರುಣಾಮೂರ್ತಿ ಯೇಸು ಕ್ರಿಸ್ತನ ದಯೆ ಮತ್ತು ಕರುಣೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಆಶ್ರಮದಲ್ಲಿರುವ ಹಿರಿಯ ಜೀವಿಗಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿರುವ ಚನ್ನಬಸಯ್ಯ ಜಂಗಮ ದಂಪತಿಗಳ ಸೇವೆಯಲ್ಲಿ ಕ್ರಿಸ್ತ ಯೇಸುವಿನ ಪ್ರತಿರೂಪ ಸ್ಪಷ್ಟವಾಗಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ನಿರ್ಮಲಾ–ಲಾಜರ್ ಮತ್ತು ಸಿರಿಲ್ ದಂಪತಿಗಳು ದೀಪಕ್ ನಿನಸಿಯ ದಂಪತಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು. ಎರಡೂ ಕುಟುಂಬಗಳ ಪುಟಾಣಿ ಮಕ್ಕಳು ಆಶ್ರಮದಲ್ಲಿ ಕೇಕ್ ಕತ್ತರಿಸಿ ಹಿರಿಯ ಜೀವಿಗಳಿಗೆ ಹಂಚಿ ಸಂತೋಷ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ಕ್ರಿಸ್ತ ಜಯಂತಿಯನ್ನು ಕೇವಲ ಹಬ್ಬದ ಆಚರಣೆಯಾಗಿ ಮಾತ್ರವಲ್ಲದೆ, ಸೇವೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಿ ರೂಪುಗೊಂಡಿತು.


