ತಾಳಿಕೋಟಿ: ತಾಲೂಕಿನ ಚಬನೂರ ಹಿರೇಮಠದ ಲಿಂಗೈಕ್ಯ ಪೂಜ್ಯ ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಗಳ ನೂತನ ಮಠ ಹಾಗೂ ಕಲ್ಯಾಣ ಮಂಟಪ ಲೋಕಾರ್ಪಣೆ ಕಾರ್ಯಕ್ರಮ ಅಂಗವಾಗಿ ಫೆಬ್ರವರಿ 5ರಂದು ನಡೆಯಲಿರುವ ಮಾತೃ ಮಡಿಲು ವಿಶೇಷ ಕಾರ್ಯಕ್ರಮಕ್ಕೆ ಕಲ್ಬುರ್ಗಿಯ ಶ್ರೀ ಶರಣ ಬಸವೇಶ್ವರ ಪೀಠದ ಮುಖ್ಯಸ್ಥರಾದ ಮಾತೋಶ್ರೀ ದ್ರಾಕ್ಷಾಯಿಣಿ ಅಮ್ಮನವರು ಚಿರಂಜೀವಿ ಶರಣಬಸಪ್ಪ ಅಪ್ಪನವರ ಜೊತೆಗೂಡಿ ಆಗಮಿಸಲಿದ್ದಾರೆ. ಡಿಸೆಂಬರ್ 25ರಂದು ಕೊಡೆಕಲ್ಲದ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಮಠಕ್ಕೆ ಆಮಂತ್ರಣ ನೀಡಲು ಹೋದ ಪರಮ ಪೂಜ್ಯರ ನಿಯೋಗಕ್ಕೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಕೊಡೆಕಲ್ದ ಪೂಜ್ಯರು ಕಲ್ಬುರ್ಗಿಯ ಪೀಠಕ್ಕೂ ಹಾಗೂ ಈ ಭಾಗದ ಭಕ್ತರಿಗೂ ಇರುವ ಅವಿನಾಭಾವ ಭಕ್ತಿಯ ಸಂಬಂಧವನ್ನು ತಿಳಿಸಿ ಕಾರ್ಯಕ್ರಮಕ್ಕೆ ಅವರು ಆಗಮಿಸುವುದರಿಂದ ಈ ಭಾಗದ ಭಕ್ತರಿಗೆ ಪುನೀತರಾಗುವ ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದಾರೆ. ಅವರ ಈ ಆಮಂತ್ರಣಕ್ಕೆ ತಮ್ಮ ಒಪ್ಪಿಗೆ ನೀಡಿ ಮಾತೋಶ್ರೀ ಅವರು ಮಾತನಾಡಿ ಫೆಬ್ರವರಿ 5ರಂದು ನಡೆಯಲಿರುವ ಮಾತೃ ಮಡಿಲು ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 3000 ಮುತ್ತೈದೆಯರಿಗೆ ಉಡಿ ತುಂಬಲಾಗುತ್ತಿರುವುದು ಸಂತೋಷದ ವಿಷಯ ಇಂಥಹ ಪುಣ್ಯದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನೀವು ನನಗೆ ನೀಡುತ್ತಿದ್ದೀರಿ ನಾನು ಖಂಡಿತವಾಗಿಯೂ ಈ ಪುಣ್ಯದ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.ಜ.28 ರಿಂದ ಚಬನೂರ ಗ್ರಾಮದಲ್ಲಿ ಆರಂಭವಾಗಲಿರುವ ಲೋಕಾರ್ಪಣೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ 7 ರವರೆಗೆ ನಡೆಯಲಿದ್ದು ಫೆ.8ಕ್ಕೆ ನೂತನ ಮಠ ಹಾಗೂ ಕಲ್ಯಾಣ ಮಂಟಪ ಲೋಕಾರ್ಪಣೆ ಗೊಳ್ಳಲಿದೆ. ಕೊಡೆಕಲ್ ಪರಮ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಈ ನಿಯೋಗದಲ್ಲಿ ನಾವದಗಿ ಬ್ರಹನ್ಮಠದ ಷಟಸ್ಥಳ ಬ್ರಹ್ಮ ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಕಲ್ಕೇರಿಯ ಸಿದ್ದರಾಮ ಶಿವಾಚಾರ್ಯರು, ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು, ಕೋಲಾರದ ಪ್ರಭು ಕುಮಾರ ಮಹಾಸ್ವಾಮಿಗಳು, ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು, ಕೊಡೆಕಲ್ದ ಪ್ರಥಮ ದರ್ಜೆ ಗುತ್ತಿಗೆದಾರರಾದ ದಾವಲಸಾಬ ಕಮತಗಿ ಮತ್ತಿತರರು ಇದ್ದರು.

