ತಾಳಿಕೋಟಿ: ಮನುಷ್ಯನ ಶರೀರದಲ್ಲಿ ಕಣ್ಣು ಎಂಬುದು ಅತ್ಯಮೂಲ್ಯ ಅಂಗವಾಗಿದೆ ಅದರ ಕುರಿತು ಯಾವ ಕಾರಣಕ್ಕೂ ನಿಸ್ಕಾಳಜಿ ತೋರಬಾರದು ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಸಲಹೆ ನೀಡಿದರು. ಶುಕ್ರವಾರ ತಾಲೂಕಿನ ಮೂಕಿಹಾಳ ಗ್ರಾಮದಲ್ಲಿ ಹಜರತ್ ಲಾಡಲೇ ಮಶಾಕ್ ದರ್ಗಾದ ಉರುಸಿನ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಅಂದತ್ವ ನಿವಾರಣೆ ಸಂಸ್ಥೆ ವಿಜಯಪುರ ಹಾಗೂ ಜಾತ್ರಾ ಉತ್ಸವ ಕಮಿಟಿ ಮೂಕಿಹಾಳ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅನುಗ್ರಹ ಕಣ್ಣಿನ ಆಸ್ಪತ್ರೆ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ವಿಶೇಷವಾಗಿ ಬಡ ಜನರಿಗೆ ಅನುಕೂಲವಾಗಲೆಂದು ಇಂತಹ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳುತ್ತದೆ, ಈ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರನ್ನು ಇಲ್ಲಿಂದ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಮಾಡಿಸಿ ಮತ್ತೆ ಊರಿಗೆ ಮರಳಿ ಬಿಡಲಾಗುವುದು. ಆದ್ದರಿಂದ ಈ ಶಿಬಿರದ ಸದುಪಯೋಗವನ್ನು ತಾವೆಲ್ಲರೂ ಮಾಡಿಕೊಳ್ಳಬೇಕು ಎಂದರು. ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಒಟ್ಟು 200 ಜನರು ನೇತ್ರ ತಪಾಸಣೆ ಮಾಡಿಕೊಂಡರಲ್ಲದೆ ಅದರಲ್ಲಿ 75 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಅದರಂತೆ 38 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಉರುಸು ಉತ್ಸವ ಸಮಿತಿಯ ಅಧ್ಯಕ್ಷ ಕಾಸೀಮ ಪಟೇಲ ಪಾಟೀಲ, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ, ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಕೊಣ್ಣೂರ ಪಿ ಎಚ್ ಸಿ ಸಿಬ್ಬಂದಿಗಳು, ಮತ್ತು ಶಿಬಿರಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *