ಮಸ್ಕಿ: ರಾಜ್ಯದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ದೌರ್ಜನ್ಯವೆಸಗುತ್ತಿರುವವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ತಹಸೀಲ್ದಾರ್ ಮಂಜುನಾಥ ಭೊಗಾವತಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಮನವಿ ಪತ್ರ ಸಲ್ಲಿಸುವ ಮೂಲಕ ಬುಧವಾರ ಆಗ್ರಹಿಸಿದರು.
ನಂತರ ದಲಿತ ಮುಖಂಡ ದೊಡ್ಡಪ್ಪ ಮುರಾರಿ ಮಾತನಾಡಿ ರಾಜ್ಯದಲ್ಲಿ ಅತ್ಯಧಿಕ ಹತ್ಯೆ ಪ್ರಕರಣಗಳು ಆಗುತ್ತಿರುವುದು ತಲೆ ತಗ್ಗಿಸುವಂತಹ ವಿಚಾರವಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು ೧೩,೧೫೪ಕ್ಕೂ ಅಧಿಕ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳಾಗಿವೆ. ಕಳೆದ ನಾಲ್ಕೈದು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಅನ್ಯ ಜಾತಿಯ ಯುವತಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ೭ ತಿಂಗಳ ಗರ್ಭಿಣಿಯನ್ನು ಸ್ವತಃ ತಂದೆಯೇ ಕೊಲೆ ಮಾಡಿದ್ದಾನೆ. ಇಂತಹ ಹಲವಾರು ಘಟನೆಗಳು ಜರುಗುತ್ತಿವೆ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ದಲಿತರ ಮೇಲೆನ ದೌರ್ಜನ್ಯ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಬೇಕೆಂದರು.
ಸಿ.ದಾನಪ್ಪ ನಿಲೋಗಲ್ ಮಾತನಾಡಿ ಇದೇ ತಿಂಗಳು ೨೨ ರಂದು ಪಾಮನಕಲ್ಲೂರು ಕ್ರಾಸ್ ಸಮೀಪದ ಹೊಲದಲ್ಲಿ ಜ್ಯೋತಿ ಎಂಬ ಯುವತಿಯ ಮೃತದೇಹ ಅನುಮಾನಸ್ಪದವಾಗಿ ದೊರೆತಿದೆ. ಈ ಎರಡು ಪ್ರಕರಣಗಳಿಗೆ ಕಾರಣರಾದ ಕೊಲೆಗಾರರನ್ನು ರಾಜ್ಯ ಸರಕಾರ ಕೂಡಲೇ ಸೂಕ್ತ ತನಿಖೆ ನಡೆಸಬೇಕು. ಈ ಎರಡು ಘಟನೆಗಳಲ್ಲಿ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು. ಪುರಸಭೆ ಸದಸ್ಯ ಮೌನೇಶ ಮುರಾರಿ, ಮಲ್ಲಯ್ಯ ಮುರಾರಿ, ಕಾಸಿಮಪ್ಪ.ಡಿ ಮುರಾರಿ, ಅಶೋಕ ಮುರಾರಿ, ಕಿರಣ ಮುರಾರಿ, ದುರ್ಗಪ್ರಸಾದ ತೋರಣದಿನ್ನಿ, ಮಲ್ಲಪ್ಪ ಗೋನಾಳ ಗಂಗಾಧರ ಮುರಾರಿ, ದುರುಗಪ್ಪ ಮುರಾರಿ, ಈರಪ್ಪ ಕುಣೆಕೆಲ್ಲೂರು, ಬಾಲಸ್ವಾಮಿ ಜಿನ್ನಾಪೂರು, ಮೋಹನ ಮುರಾರಿ, ಬಸವಂತ ಕಡಬೂರು, ಸುಭಾಸ ಕಡಬೂರು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *