ಸಿಂಧನೂರು : ಸಿಂಧನೂರು ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿಯಿಂದ ವಿದ್ಯಾರ್ಥಿ/ಯುವಜನರು ದುಶ್ಚಟಕ್ಕೆ ಒಳಗಾಗಿದ್ದು, ಇದನ್ನು ತಡೆಯಲು ಪೊಲೀಸ್, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳನ್ನೊಳಗೊಂಡ ಸಭೆ ಕರೆದು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿ ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದಿಂದ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಲಾಯಿತು.
ಸಾರ್ವಜನಿಕರ ಆತಂಕ ನಿವಾರಿಸಿ
ನಗರದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ಕಡಿವಾಣ ಹಾಕದೇ ಹೋದರೆ ಸಾಮಾಜಿಕ ಹಾನಿಗೆ ದಾರಿ ಮಾಡಿಕೊಡುವ ಸಂಭವ ಹೆಚ್ಚಿದೆ. ನಗರದ ವಿವಿಧ ವಾರ್ಡ್ ಗಳಲ್ಲಿ, ನಗರಕ್ಕೆ ಹೊಂದಿಕೊoಡ ನಿರ್ಜನ ಪ್ರದೇಶ ಹಾಗೂ ಇತರೆಡೆ ಗಾಂಜಾ ಪ್ಯಾಕೆಟ್ ತಯಾರಿಸಿ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಗಾಂಜಾ ಮತ್ತು ಮಾದಕ ವಸ್ತುಗಳ ಪೆಡ್ಲರ್‌ಗಳು ವಿದ್ಯಾರ್ಥಿ, ಯುವಜನರನ್ನು ಗುರಿಯಾಗಿಟ್ಟುಕೊಂಡು ವ್ಯವಸ್ಥಿತವಾಗಿ ಜಾಲ ಹೆಣೆದು, ಮುಗ್ದರನ್ನು ಬಲಿಪಶು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಗಾಂಜಾ ಮತ್ತು ಮಾದಕ ವಸ್ತು ಸೇವಿಸಿದ ಯುವಕರು ನಶೆಯಲ್ಲಿ ನಗರದ ವಾರ್ಡ್ಗಳಲ್ಲಿ ಸೈಕಲ್ ಮೋಟರ್‌ಗಳನ್ನು ಮನಬಂದoತೆ ಚಲಾಯಿಸುವುದು, ಬಡಿಗೆ ಇಲ್ಲವೇ ಇನ್ನಿತರೆ ವಸ್ತುಗಳನ್ನು ಕೈಯಲ್ಲಿ ತಿರುಗಿಸುತ್ತಾ ಸಾರ್ವಜನಿಕರಿಗೆ ಬಹಿರಂಗವಾಗಿ ಹೆದರಿಸುವುದು-ಬೆದರಿಸುವುದು ಮಾಡುತ್ತಿದ್ದಾರೆ. ದಿನವೂ ಒಂದಿಲ್ಲೊóದು ವಾರ್ಡ್ ಗಳಲ್ಲಿ ಈ ತರಹದ ಘಟನೆಗಳು ನಡೆಯುತ್ತಿದ್ದು, ಇದರಿಂದ ಹಲವು ಜನರು ಆತಂಕಿತರಾಗಿದ್ದಾರೆ ಎಂದು ಮನವಿಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಗರದ ಮಹೆಬೂಬಿಯಾ ಕಾಲೋನಿ, ಶರಣಬಸವೇಶ್ವರ ಕಾಲೋನಿ, ಇಂದಿರಾನಗರ, ಪ್ರಶಾಂತನಗರ, ಖದರಿಯಾ ಕಾಲೋನಿ, ಜವಳಗೇರಾ ಹಾಗೂ ಕೆಲ ಪುನರ್ವಸತಿ ಕ್ಯಾಂಪ್‌ಗಳಲ್ಲಿ ಗಾಂಜಾ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಚಾಕೂಲೇಟ್‌ನಲ್ಲಿ ಮಾದಕ ವಸ್ತುವನ್ನು ಸೇರಿಸಿ ಮಾರಾಟ, ಡ್ರಗ್ಸ್ ಒಳಗೊಂಡ ಇಂಜೆಕ್ಷನ್ ಮಾರಾಟ ಮಾಡಲಾಗುತ್ತಿದೆ ಎಂದು ನಾಗರಿಕರಿಂದ ತಿಳಿದುಬಂದಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಇದನ್ನು ತಡೆಯಲು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ಮಾಹಿತಿ ಸೋರಿಕೆ ಆರೋಪ
ಇತ್ತೀಚೆಗೆ ಪೊಲೀಸ್ ಇಲಾಖೆಯೇ ಸಿಂಧನೂರಿನ ಸರ್ಕ್ಯೂಟ್‌ಹೌಸ್‌ನಲ್ಲಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಕುರಿತ ಪ್ರಮುಖ ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರ ಸಭೆಯಲ್ಲಿ, ಮಾದಕ ವಸ್ತುಗಳ ಮಾರಾಟದ ಜಾಲದ ಕುರಿತು ಚರ್ಚೆಯಾಗಿರುತ್ತದೆ. ಈ ಸಭೆಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರೂ ಕೂಡ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿರುತ್ತಾರೆ. ನಗರದ ಮುಖಂಡರೊಬ್ಬರು ಪೊಲೀಸ್ ಅಧಿಕಾರಿಯೊಬ್ಬರಿಗೆ ಡ್ರಗ್ ಪೆಡ್ಲರ್‌ವೊಬ್ಬನ ಕುರಿತಾಗಿ ನೀಡಿದ ಗೌಪ್ಯ ಮಾಹಿತಿಯು ಸೋರಿಕೆಯಾಗಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಬದಲಾಗಿ, ಮಾಹಿತಿ ನೀಡಿದ ವ್ಯಕ್ತಿಯ ಮನೆಗೆ ಆರೋಪಿತ ಯುವಕ ಡಿ.15ರಂದು ರಾತ್ರೋ ರಾತ್ರಿ ನುಗ್ಗಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದೇ ಇದ್ದರೆ ಸಾರ್ವಜನಿಕರು ಅಪರಾಧ ತಡೆಗೆ ಸಹಕರಿಸುವುದಾದರೂ ಹೇಗೆ ? ಹೀಗಾದರೆ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳಿಗೆ ಹೇಗೆ ಮಾಹಿತಿ ಕೊಡುತ್ತಾರೆ ? ಒಂದು ವೇಳೆ ಮಾಹಿತಿ ಕೊಟ್ಟವರ ಹೆಸರು ಈ ರೀತಿ ಸೋರಿಕೆಯಾಗಿ ನಾಳೆ ಏನಾದರೂ ಅವಘಡವಾದರೆ ಹೊಣೆ ಯಾರು ? ಒಕ್ಕೂಟದ ಸಂಚಾಲಕರು ಶಾಸಕರ ಗಮನ ಸೆಳೆದರು.
ಈ ಕುರಿತು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಅಧಿಕಾರಿಗಳ ಮತ್ತು ತಾಲೂಕು ದಂಡಾಧಿಕಾರಿಗಳ ಸಭೆ ಕರೆದು, ವಿಸ್ತೃತವಾಗಿ ಚರ್ಚಿಸಿ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಒಕ್ಕೂಟದ ಸಂಚಾಲಕರು ಮನವಿ ಮಾಡಿದರು.
ಜನವರಿ ಮೊದಲ ವಾರದಲ್ಲಿ ಸಭೆ, ಶಾಸಕರ ಭರವಸೆ
ಈ ಕುರಿತಂತೆ ಜನವರಿ 2026ರ ಮೊದಲ ವಾರದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ವಿಸ್ತೃತವಾಗಿ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಒಕ್ಕೂಟದ ಸಂಚಾಲಕರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಬಾಬರ್‌ಪಾಷಾ ವಕೀಲರು, ಹುಸೇನ್‌ಸಾಬ್, ಖಾದರ್‌ಸುಬಾನಿ, ಬಸವರಾಜ ಬಾದರ್ಲಿ, ಜಿಲಾನಿಪಾಷಾ, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಶಂಕರ ಗುರಿಕಾರ, ಬಸವಂತರಾಯಗೌಡ ಕಲ್ಲೂರು, ರೆಹಮಾನ್‌ಸಾಬ್, ಅಬುಲೈಸ್, ಬಸವರಾಜ ಹಳ್ಳಿ, ಸರ್ಪರಾಜ್‌ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *