ರಾಯಚೂರು ಡಿಸೆಂಬರ್ 23 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಡಿಸೆಂಬರ್ 22ರಂದು ನಗರದ ಸರ್ಕಾರಿ ದತ್ತು ಸ್ವೀಕಾರ ಕೇಂದ್ರ, ಸರ್ಕಾರಿ ವೀಕ್ಷಣಾಲಯ, ಸರ್ಕಾರಿ ಬಾಲಕಿಯರ ಬಾಲಮಂದಿರ ಹಾಗೂ ಬಾಲಕರ ಬಾಲ ಮಂದಿರ ಸೇರಿದಂತೆ ವಿವಿಧೆಡೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದರು.
ಮೊದಲಿಗೆ ನಗರದ ಸರ್ಕಾರಿ ದತ್ತು ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಂಸ್ಥೆಯಲ್ಲಿನ ಮಕ್ಕಳ ಸುರಕ್ಷತೆ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ಸಂಸ್ಥೆಯಲ್ಲಿನ ಮಕ್ಕಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು. ಗುಣಮಟ್ಟದ ಆಹಾರ ವಿತರಣೆ ಮಾಡಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತೆ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನಂತರ ಸರ್ಕಾರಿ ವೀಕ್ಷಣಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಅಡುಗೆ ಮನೆ, ಮಕ್ಕಳ ವಾಸದ ಕೋಣೆ, ಶೌಚಗೃಹಗಳನ್ನು ವೀಕ್ಷಿಸಿ ಶುಚಿತ್ವ ಮತ್ತು ಮೂಲಭೂತ ಸೌಕರ್ಯದ ಬಗ್ಗೆ ಗಮನ ಹರಿಸಲು ಸೂಚನೆಗಳನ್ನು ನೀಡಿದರು. ಇದೆ ವೇಳೆ, ಜಿಲ್ಲಾಧಿಕಾರಿಗಳು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೊಂದಿಗೆ ಆಪ್ತವಾಗಿ ಮಾತನಾಡಿದರು. ಇಲ್ಲಿಂದ ಬಿಡುಗಡೆ ಆದ ಮೇಲೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಮುಂದೆ ಯಾವತ್ತೂ ತಪ್ಪು ಮಾಡಬಾರದು ಎಂದು ಸಲಹೆ ಮಾಡಿದರು.
ನಂತರ ಬಾಲಕಿಯರ ಬಾಲ ಮಂದಿರ ಮತ್ತು ಬಾಲಕರ ಬಾಲ ಮಂದಿರಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲಿನ ಆಹಾರ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಿದರು. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಂಸ್ಥೆಯ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.
ನಂತರ, ಶಿಶುಕೇಂದ್ರಿತ ಯೋಜನೆಯಡಿ ಅನುದಾನ ಸಂಹಿತೆಗೆ ಒಳಪಟ್ಟ ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾ ಸಮಿತಿ ಇವರಿಂದ ನಿರ್ವಹಣೆ ಮಾಡಲಾಗುತ್ತಿರುವ ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿನ ವಿಶ್ವಧರ್ಮ ಬುದ್ದಿಮಾಂದ್ಯ ಮಕ್ಕಳ ವಿಶೇಷ ಶಾಲೆಗೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗಕರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಆಶಾದೀಪ ಟ್ರಸ್ಟ್ ನಿರ್ವಹಣೆ ಮಾಡುತ್ತಿರುವ ಪಬ್ಲಿಕ್ ಗಾರ್ಡನ್ ಹತ್ತಿರದಲ್ಲಿನ ಆಶಾದೀಪ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಮೂಲಭೂತ ಸೌಕರ್ಯಗಳ ಬೇಡಿಕೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ಕುಮಾರ್, ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಶ್ರೀದೇವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕಿರಿಲಿಂಗಪ್ಪ, ರಮೇಶ ಹಾಗೂ ಸಂಸ್ಥೆಯ ಅಧೀಕ್ಷಕರು ಇದ್ದರು.


