ನೈಜದೆಸೆ ನ್ಯೂಸ್
ವರದಿ-ಕವಿತಾ ಹಿರೇಮಠ

ಕವಿತಾಳ: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸುವ ಬಹುಕಾಲದ ಕನಸು ಇದೀಗ ಸಾಕಾರವಾಗುವ ಹಂತಕ್ಕೆ ಬಂದಿದೆ. ಸುಮಾರು ರೂ.99೦.೦೦ ಕೋಟಿ ಅಂದಾಜು ವೆಚ್ಚದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.ಈ ಯೋಜನೆಯಡಿ ನಾರಾಯಣಪುರ ಜಲಾಶಯದ ಬಲದಂಡೆ ಕಾಲುವೆಯಿಂದ ನೀರನ್ನು ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು, ಸುತ್ತಮುತ್ತಲ ಗ್ರಾಮಗಳು ಹಾಗೂ ಇತರ ಕೃಷಿ ಪ್ರದೇಶಗಳಿಗೆ ಹರಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಲಭಿಸಿ, ರೈತರ ಬದುಕಿಗೆ ಆರ್ಥಿಕ ಸ್ಥಿರತೆ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಮಸ್ಕಿ ತಾಲ್ಲೂಕು ವರ್ಷಗಳಿಂದ ಮಳೆಯ ಕೊರತೆ, ಭೂಗರ್ಭ ಜಲಮಟ್ಟ ಕುಸಿತ ಮತ್ತು ಬೆಳೆ ನಷ್ಟದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆ ನಾರಾಯಣಪುರ ಬಲದಂಡೆ ಕಾಲುವೆ ಆಧಾರಿತ ಯೋಜನೆ ತಾಲ್ಲೂಕಿನ ಕೃಷಿ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಆಡಳಿತಾತ್ಮಕ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ತಾಂತ್ರಿಕ ಪರಿಶೀಲನೆ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಕಾಮಗಾರಿಗೆ ಟೆಂಡರ್ ಆಹ್ವಾನ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.ರಾಜಕೀಯ ಇಚ್ಛಾಶಕ್ತಿ: ಮಸ್ಕಿ ಶಾಸಕರಾದ ಬಸನಗೌಡ ತುರ್ವಿಹಾಳ ಅವರು ಈ ಯೋಜನೆಗಾಗಿ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಈ ಅನುಮೋದನೆಯು ಈ ಭಾಗದ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿದೆ.

ನಾರಾಯಣಪುರ ಬಲದಂಡೆ ಕಾಲುವೆ ಆಧಾರಿತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿರುವುದು ಮಸ್ಕಿ ತಾಲ್ಲೂಕಿನ ರೈತರಿಗೆ ಹೊಸ ಬದುಕಿನ ಆಶಾಕಿರಣವಾಗಿದೆ.

—ಮಲ್ಲಿಕಾರ್ಜುನ ಯದ್ದಲದ್ದಿನಿ. ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮಸ್ಕಿ

ಮಸ್ಕಿ ತಾಲ್ಲೂಕು ದಶಕಗಳಿಂದ ನೀರಿನ ಕೊರತೆಯಿಂದ ನರಳುತ್ತಿದೆ. ಪಾಮನಕಲ್ಲೂರು ಸೇರಿದಂತೆ ಅನೇಕ ಗ್ರಾಮಗಳು ಮಳೆಯನ್ನೇ ಅವಲಂಬಿಸಿ ಕೃಷಿ ನಡೆಸುವ ಸ್ಥಿತಿಯಲ್ಲಿವೆ. ರೂ.99೦ ಕೋಟಿ ವೆಚ್ಚದ ಈ ಯೋಜನೆ ಅನುಷ್ಠಾನಗೊಂಡರೆ ರೈತರ ಬದುಕು ಸಂಪೂರ್ಣವಾಗಿ ಬದಲಾಗಲಿದೆ. ಇದು ಕೇವಲ ನೀರಾವರಿ ಯೋಜನೆ ಅಲ್ಲ, ತಾಲ್ಲೂಕಿನ ಆರ್ಥಿಕ ಪುನರ್ ನಿರ್ಮಾಣದ ಹೆಜ್ಜೆ.

— ಬಸನಗೌಡ ತುರ್ವಿಹಾಳ, ಶಾಸಕರು ಮಸ್ಕಿ.

ನಾರಾಯಣಪುರ ಬಲದಂಡೆ ಕಾಲುವೆ ನೀರನ್ನು ಮಸ್ಕಿ ಪ್ರದೇಶಕ್ಕೆ ತಲುಪಿಸುವುದು ನಮ್ಮ ಬಹುಕಾಲದ ಬೇಡಿಕೆಯಾಗಿತ್ತು. ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಈಗ ಯೋಜನೆ ವಿಳಂಬವಿಲ್ಲದೆ ಜಾರಿಯಾಗಬೇಕು. ಭೂಸ್ವಾಧೀನ ಮತ್ತು ತಾಂತ್ರಿಕ ಪ್ರಕ್ರಿಯೆಗಳನ್ನು ಶೀಘ್ರ ಮುಗಿಸಲು ಒತ್ತಾಯಿಸಲಾಗುವುದು.

— ಹುಸೇನಬಾಷ ಗುರುಗುಂಟಿ ರೈತ ಅಮೀನಗಡ

 

ಪಾಮನಕಲ್ಲೂರ 5ಎ ಕಾಲುವೆಗೆ 99೦ ಕೋಟಿ ಕೊಟ್ಟ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು. ಹಲವಾರು ದಶಕಗಳಿಂದ 108 ಗ್ರಾಮಗಳ 10800 ಎಕರೆ ರೈತರ ಜಮೀನಿಗೆ ನೀರುಣಿಸುವ ನೀರಾವರಿ ಯೋಜನೆಗಾಗಿ ನಾವು ಈ ಹಿಂದೆ ನಡೆಸಿದ ನೀರಾವರಿ ಹೋರಾಟಕ್ಕೆ ಇಂದು ಪ್ರಾಕ್ಟಿಕಲ್ ಆಗಿ ಜಯ ದೊರೆತಿದೆ. ಎರಡು ವರ್ಷಗಳ ಹಿಂದೆ ಎನ್‌ಆರ್‌ಬಿಸಿ 5ಎ ನಾಲಯೋಜನೆಯನ್ನು ತಮ್ಮ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯನವರು ಘೋಷಿಸಿದ್ದರು. ಆದರೆ, ಅದಕ್ಕೆ ಹಣಕಾಸಿನ ಅನುಮೋದನೆ ಇರಲಿಲ್ಲ. ಆದರೆ ಬೆಳಗಾವಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕಕ್ಕೆ 35೦೦ ಕೋಟಿ ವಿಶೇಷ ಪ್ಯಾಕೇಜ್ ಹಣ ಘೋಷಣೆ ಮಾಡಿದ್ದಲ್ಲದೆ, ಆ ಪೈಕಿ 990 ಕೋಟಿ ಹಣವನ್ನು ಎನ್‌ಆರ್‌ಬಿಸಿ 5ಎ ಕಾಲುವೆಗೆ ನೀಡಿದ್ದು ಅತ್ಯಂತ ಸಂತೋಷದ ಸಮಾಚಾರವಾಗಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಜಲಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ಅವರಿಗೆ ಎನ್‌ಆರ್‌ಬಿಸಿ 5ಎ ನಾಲ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಅಭಿನಂದನೆಗಳನ್ನು ತಿಳಿಸಲಾಗಿದೆ. ಕೂಡಲೇ, ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಹಾಗೂ ನಮ್ಮ ಭಾಗದ ಶಾಸಕರು, ಕಾಲುವೆ ನಿರ್ಮಾಣಕ್ಕೆ ಮುಂದಾಗ ಬೇಕೆಂದು ಈ ಮೂಲಕ ಒತ್ತಾಯಿಸಲಾಗಿದೆ. ಈ ಮಹತ್ವಕಾಂಕ್ಷೆಯ ನೀರಾವರಿ ಹೋರಾಟದಲ್ಲಿ ಸಾಕಷ್ಟು ಪರಿಶ್ರಮ ಹಾಕಿ ಹೋರಾಟವನ್ನು ಮುನ್ನಡೆಸಿದ ಎಲ್ಲ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ವಿಶೇಷವಾಗಿ ಅಮೀನಗಡ ವಟಗಲ್ ಪಾಮನಕಲ್ಲೂರ ರೈತರಿಗೆ ಈ ಮೂಲಕ ಕ್ರಾಂತಿಕಾರಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ

ಆರ್. ಮಾನಸಯ್ಯ, ಸಂಚಾಲಕರು, ಎನ್‌ಆರ್‌ಬಿಸಿ 5ಎ ಕಾಲುವೆ ಸಂಯುಕ್ತ ಹೋರಾಟ ಸಮಿತಿ, ಪಾಮನಕಲ್ಲೂರ

 

 

Leave a Reply

Your email address will not be published. Required fields are marked *