ಸಿಂಧನೂರು : ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಬೇಕು. ಅಲ್ಲಿಯವರೆಗೆ ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲಿಯವರೆಗೂ ಸರ್ಕಾರದಲ್ಲಿ ಉಳಿದಿರುವ ಬಾಕಿ ವೇತನ ನೀಡಬೇಕೆಂಬ ಹಲವಾರು ಬೇಡಿಕೆಗಳಿಗಾಗಿ ಜನವರಿ 5 ರಂದು ಮುಖ್ಯಮಂತ್ರಿ ಮನೆಮುಂದೆ ಹೋರಾಟ ನಡೆಸಲಾಗುವುದು ಎಂದು ಉಪಾಧ್ಯಕ್ಷ ಸಿದ್ದಪ್ಪ ಬಾವಿಮನೆ ತಿಳಿಸಿದರು.
ಪತ್ರಿಕಾ ಭವನದಲ್ಲಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ 2023 ಜನವರಿ 6 ರಂದು ನಮ್ಮ ಗೌರವ ಧನವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿ ಅನುಕೂಲ ಮಾಡಿಕೊಟ್ಟರು.
ಕಳೆದ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ಅತ್ಯಂತ ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದು, 60ನೇ ವಯಸ್ಸಿನವರೆಗೂ ಸೇವೆ ಮುಂದುವರಿಸಲು ಸೇವಾ ಭದ್ರತೆ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಸಿದೆ. 2024 ಅಕ್ಟೋಬರ್ ತಿಂಗಳಿಂದ ಇಲ್ಲಿತನಕ ಸರ್ಕಾರ 20 ಬಾರಿ ನೇಮಕಾತಿ ಪ್ರಕಟಣೆ ಹೊರಡಿಸುವ ಮೂಲಕ ನಾವು ಸೇವೆಯಲ್ಲಿ ಆತಂಕ, ಒತ್ತಡದಲ್ಲಿ ಇರುವಂತೆ ಮಾಡಿದೆ. 40 ಜನ ಅತಿಥಿ ಉಪನ್ಯಾಸಕರು ಜೀವ ಕಳೆದುಕೊಂಡಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದ ಸದನದ ಮುಂದೆ ಪ್ರತಿಭಟನೆ ನಿರತರಾದ ನಮಗೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಸಚಿವ ಎಂ.ಸುಧಾಕರ್, ಕಾನೂನು ಸಚಿವ ಎಚ್.ಕೆ.ಪಾಟೀಲ್, ಅವರೊಂದಿಗೆ ಈಗಾಗಲೇ ಸಭೆ ನಡೆಸಿ, ಇಲ್ಲಿತನಕ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು, ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲಾ ಅತಿಥಿ ಉಪನ್ಯಾಸಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಘೋಷಣೆ ಮಾತ್ರ ಬಾಕಿಯಿದೆ ಎಂದು ಹೇಳಿ ನಮ್ಮನ್ನು ಸಮಾಧಾನ ಮಾಡಿದ್ದರು.
ನಮ್ಮ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಚಾರಿಸಿದಾಗ ಸಚಿವ ಸಂಪುಟದಲ್ಲಿ ಈಗಾಗಲೇ ನಿರ್ಧಾರವಾಗಿದೆ. ಇನ್ನೊಂದು ವಾರದಲ್ಲಿ ತಮ್ಮನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಇನ್ನೊಂದು ಕಡೆಗೆ ಆಯುಕ್ತರ ಎರಡನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆ ಇಂದಿನಿಂದ ಪ್ರಾಂಭಿಸಲು ಆದೇಶಿಸಿದ್ದಾರೆ. ಇಲ್ಲಿತನಕ ಸೇವೆ ಸಲ್ಲಿಸಿರುವ ಸುಮಾರು 6 ಸಾವಿರಕ್ಕೂ ಹೆಚ್ಚು ಉಪನ್ಯಾಸಕರನ್ನು ಬೀದಿಗೆ ತಳ್ಳಿದಂತಾಗಿದೆ.
ಕೂಡಲೇ ಮುಖ್ಯಮಂತ್ರಿಗಳ ಭರವಸೆಯಂತೆ ನಮ್ಮನ್ನು ರಕ್ಷಣೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಒಂದುವೇಳೆ ರಕ್ಷಣೆ ಮಾಡದೇ ಹೋದರೆ, 2026 ರ
ಜನವರಿ 5 ರಂದು ಮುಖ್ಯಮಂತ್ರಿ ಮನೆಮುಂದೆ ಹೋರಾಟಕ್ಕೆ ರಾಜ್ಯದಾದ್ಯಂತ ಕರೆ ಕೊಡುತ್ತಿದ್ದೇವೆ ಎಂದರು.
ಈ ವೇಳೆ: ತಾಲೂಕು ಕಾರ್ಯದರ್ಶಿ ಅಮೀರ್ ಅಮದ್, ಶಂಕರ್ ವಾಲೇಕರ್, ಮರಿಯಪ್ಪ, ಹನುಮಂತ, ಇದ್ದರು.

