ರಾಯಚೂರು: ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಬಹುದೊಡ್ಡ ಸೇತುವೆಯ ಬಾಕಿ ಇರುವ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕ್ರಮ ವಹಿಸಬೇಕೆಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಡಾ.ಬಾಬುರಾವ್ ಮನವಿ ಮಾಡಿಕೊಂಡಿದ್ದಾರೆ.
ಟೆಂಡರ್ ಪ್ರಕಾರ ಈ ಕಾಮಗಾರಿ ನವೆಂಬರ್ 6, 2021 ರಂದು ಪ್ರಾರಂಭವಾಗಿ ಇದೇವರ್ಷ ಅಕ್ಟೋಬರದೊಳಗೆ ಪೂರ್ಣಗೊಳಿಸಬೇಕಾಗಿತ್ತು. ಕಾಮಗಾರಿ ಪ್ರಗತಿ ಹಂತದಲ್ಲಿದ್ದು ವೇಗವನ್ನು ಪಡೆದುಕೊಳ್ಳಬೇಕಾಗಿದೆ. ಏಕೆಂದರೆ ಹಳೆಯ ಬ್ರಿಡ್ಜ್ ಪುರಾತನ ಕಾಲದ್ದಾಗಿರುವುದರಿಂದ ಅದು ಶಿಥಿಲಾವಸ್ಥೆಗೆ ತಲುಪಿದಂತೆ ಕಾಣುತ್ತಿದೆ. ಯಾವ ಗಳಿಗೆಯಲ್ಲಿ ಏನಾಗುತ್ತದೆ ಎಂಬ ಆತಂಕ ಇರುವುದರಿಂದ ಹೊಸ ಬ್ರಿಡ್ಜನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕಾಗಿದೆ.
ಎರಡು ರಾಜ್ಯಗಳಿಂದ ಜನ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಕ್ಕೆ ಇದೇ ಬ್ರಿಡ್ಜ್ ನ್ನು ಉಪಯೋಗಿಸುತ್ತಿರುವುದರಿಂದ ಬ್ರಿಡ್ಜ್ ನ್ನು ಪೂರ್ಣಗೊಳಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಆದ್ದರಿಂದ ಸಂಬಂಧಪಟ್ಟ ಮಂತ್ರಿಗಳು ಹಾಗೂ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಈ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.

