ಮಾನ್ವಿ :
ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಮಾನ್ವಿ ತಾಲೂಕಿನ ಸರಕಾರಿ ಹಾಗೂ ಖಾಸಗಿ ಶಾಲೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ 21 ದಿನಗಳ ಕಾಲ ಉಚಿತ ಯೋಗಭ್ಯಾಸವನ್ನು ನಡೆಸಲಾಯಿತು. ಶಿಬಿರದ ಅಂಗವಾಗಿ ಧ್ಯಾನ ದಿನಾಚರಣೆಯ ಮಹತ್ವ ಕುರಿತು ಚರ್ಚೆಗಳು ನಡೆಯಿತು.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ತಾಲೂಕು ದಂಡಾಧಿಕಾರಿಗಳಾದ ಭೀಮರಾಯ ರಾಮಸಮುದ್ರ, ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೂ, ಯೋಗ ಗುರುಗಳಾದ ಅನ್ನದಾನಯ್ಯನವರ ಸೇವೆ ಶ್ಲಾಘನೀಯವಾಗಿದ್ದು, ಇಂತಹ ಮಾದರಿಯ ಯೋಗ–ಧ್ಯಾನ ಕಾರ್ಯಕ್ರಮಗಳಿಗೆ ತಾಲೂಕಾ ಆಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಧ್ಯಾನ ದಿನಾಚರಣೆಯ ಅಂಗವಾಗಿ ಡಿಸೆಂಬರ್ 21 ರಂದು ಬೆಳಿಗ್ಗೆ 5:30 ರಿಂದ 6:30ರ ವರೆಗೆ ಯೋಗ ಗುರು ಅನ್ನದಾನಯ್ಯನವರು ಧ್ಯಾನ ಶಿಬಿರವನ್ನು ನಡೆಸಿಕೊಟ್ಟರು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ವಕೀಲರಾದ ಎನ್. ರಾಜು, ಧ್ಯಾನದ ಕೊಡುಗೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತವಾಗಿದ್ದು, ಇದು ಹೆಮ್ಮೆಯ ವಿಷಯ ಎಂದು ಹೇಳಿದರು.
ಡಾ. ಅಂಬಿಕಾ ಮಧುಸೂದನ್ ಮಾತನಾಡಿ, ನಿತ್ಯ ಧ್ಯಾನ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಚೈತನ್ಯ ಹೆಚ್ಚಾಗುತ್ತದೆ ಎಂದು ಹೇಳಿದರು. ಕಲ್ಮಠ ಆಯುರ್ವೇದಿಕ್ ಕಾಲೇಜಿನ ಡಾ. ವಿಕ್ರಮಾದಿತ್ಯ ಮಾತನಾಡಿ, ಧ್ಯಾನವು ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟರು.
ಧ್ಯಾನ ದಿನಾಚರಣೆಯ ಅಂಗವಾಗಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಲ್ಮಠ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿಗಳು, ನಿತ್ಯ ಯೋಗ ಸಾಧಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

