ಸಾಮಾಜಿಕ–ಆರ್ಥಿಕ ಸಮೀಕ್ಷೆ ಬಳಿಕವೇ ಹಕ್ಕುಪತ್ರ ವಿತರಣೆ,
ಅರ್ಹರಿಗೆ ಮಾತ್ರ ಲಾಭ ಸಿಗಲಿ – ಸಂಘಟನೆಗಳ ಒತ್ತಾಯ
ಕವಿತಾಳ: ಸಿರವಾರ ತಾಲೂಕು ಕವಿತಾಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ಮೂಲಕ ನೀಡಲಾಗುತ್ತಿರುವ ಹಕ್ಕುಪತ್ರಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಬಹುಜನ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಜಸ್ಪಾಲ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಬಹುಜನ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕರಾದ ಅಲ್ಲಮಪ್ರಭು ಮಾತನಾಡಿ ಪಟ್ಟಣದ ತ್ರಯಂಬಕೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಬಾರದು. ಪ್ರಸ್ತುತ ಹಕ್ಕುಪತ್ರ ಹಂಚಿಕೆ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಕೊರತೆಯಿದ್ದು, ಯಾರು ನಿಜವಾದ ಬಡವರು, ಯಾರು ಅನರ್ಹರು ಎಂಬುದರ ಕುರಿತು ಸಮಗ್ರ ಮಾಹಿತಿಯಿಲ್ಲದೇ ವಿತರಣೆಗೆ ಮುಂದಾಗಿರುವುದು ಗೊಂದಲ ಹಾಗೂ ಅಕ್ರಮಗಳಿಗೆ ದಾರಿ ಮಾಡಿಕೊಡಲಿದೆ ಎಂದು ಆರೋಪಿಸಿದರು. ಈ ಹಿನ್ನೆಲೆ ಪ್ರತಿ ಕುಟುಂಬದ ಆದಾಯ, ವಾಸ್ತವ್ಯ ಅವಧಿ, ಜಮೀನು ಹೊಂದಿರುವ ಮಾಹಿತಿ, ಕುಟುಂಬದ ಸಾಮಾಜಿಕ ಸ್ಥಿತಿ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡ ಸಾಮಾಜಿಕ–ಆರ್ಥಿಕ ಸಮೀಕ್ಷೆ ಅಗತ್ಯವೆಂದು ಹೇಳಿದರು.
ಅರ್ಹ ದಲಿತರು, ಹಿಂದುಳಿದ ವರ್ಗಗಳು ಹಾಗೂ ನಿಜವಾದ ಸ್ಲಂ ನಿವಾಸಿಗಳಿಗೆ ಮಾತ್ರ ಹಕ್ಕುಪತ್ರ ಸಿಗಬೇಕು ಎಂಬುದು ಸಂಘಟನೆಗಳ ಸ್ಪಷ್ಟ ನಿಲುವಾಗಿದೆ. ಸಮೀಕ್ಷೆ ಪೂರ್ಣಗೊಳ್ಳುವವರೆಗೂ ಹಕ್ಕುಪತ್ರ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಇದರ ಜೊತೆಗೆ, ಸಮೀಕ್ಷಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು, ನಂತರ ಅಂತಿಮ ಪಟ್ಟಿಯನ್ನು ತಯಾರಿಸಿ ಹಕ್ಕುಪತ್ರ ವಿತರಣೆ ನಡೆಸಬೇಕು ಎಂದು ಸಲಹೆ ನೀಡಿದರು. ಇದರಿಂದ ಪಾರದರ್ಶಕತೆ ಹೆಚ್ಚುವ ಜೊತೆಗೆ ಭವಿಷ್ಯದ ಕಾನೂನು ವಿವಾದಗಳನ್ನು ತಪ್ಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಮೇಲಧಿಕಾರಿಗಳ ಮಾರ್ಗಸೂಚಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಈರಣ್ಣ ಕೆಳಗೇರಿ, ಯಾಕೋ ಕಡತಲ್, ಹನುಮಂತ ಬಳ್ಳಾಪುರ, ಪ.ಪಂ ನಾಮನಿರ್ದೇಶನ ಸದಸ್ಯ ಅಯ್ಯಪ್ಪ ನಿಲೋಗಲ್, ಮೌನೇಶ್ ಕೊಡ್ಲಿ, ಕಿರಿಲಿಂಗಪ್ಪ ಮ್ಯಾಗಳಮನಿ, ಬಸವರಾಜ, ಮಹಾದೇವ, ಹುಚ್ಚಪ್ಪ, ಆಜಪ್ಪ ಇದ್ದರು.

