ಕೊಪ್ಪಳ, 19 ಡಿಸೆಂಬರ್ : ಕಂದಾಯಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಎಲ್ಲಾ ವಾರ್ಡಿನ ಕರ ವಸೂಲಿಗಾರರು ಬಾಕಿ ಇರುವ ತೆರಿಗೆ ಪಟ್ಟಿಯನ್ನು ಸಿದ್ಧಪಡಿಸಿ, ನಗರಸಭೆಯ ಆದಾಯವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ ಸುರೇಶ ಬಿ. ಇಟ್ನಾಳ ಅವರು ಹೇಳಿದ್ದಾರೆ.
ಕೊಪ್ಪಳ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕರ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರುಗಳಿಗೆ ಕ್ರಮವಾಗಿ ನೋಟಿಸ್ ಜಾರಿ ಮಾಡಿ ಆಸ್ತಿ ಕರ ವಸೂಲಾತಿ ಮಾಡಬೇಕು. ಅದೇ ರೀತಿ ನೀರಿನ ಕರ ವಸೂಲಾತಿ, ಉದ್ದಿಮೆ ಪರವಾನಿಗೆ ಶುಲ್ಕ ವಸೂಲಾತಿ, ಉದ್ದಿಮೆ ಪರವಾನಿಗೆ ನವೀಕರಣ, ಜಾಹೀರಾತು ಶುಲ್ಕ ವಸೂಲಾತಿ, ನಗರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ಮಾಡಲು ಅಗತ್ಯ ಕ್ರಮ ವಹಿಸಬೇಕು.
ನಗರದಲ್ಲಿರುವ ಎಲ್ಲಾ ಸಾರ್ವಜನಿಕ ಸ್ವತ್ತುಗಳಿಗೆ ಇ-ಖಾತಾ ತಂತ್ರಾಂಶದಲ್ಲಿ ಆಸ್ತಿಗಳ ಮಾಹಿತಿಯನ್ನು ನಮೂದಿಸಲು ಪ್ರತಿ ಸೋಮವಾರ ವಾರ್ಡಗಳಲ್ಲಿ ಶಿಭಿರವನ್ನು ಏರ್ಪಡಿಸಿ, ದಾಖಲಾತಿಗಳನ್ನು ಸಂಗ್ರಹಿಸಿಕೊಂಡು 500 ಆಸ್ತಿಗಳಿಗೆ ಗುರಿಯನ್ನು ನಿಗದಿಪಡಿಸಬೇಕು. ಆಸ್ತಿಯ ಮಾಲೀಕರುಗಳು ಆಸ್ತಿ ತೆರಿಗೆ ಪಾವತಿ ಮಾಡಿದ ತೆರಿಗೆ ವಿವರವನ್ನು ಸ್ಥಾನಿಕವಾಗಿ ಪರಿಶೀಲನೆ ಮಾಡಿ, ಜತೆಗೆ ಕಟ್ಟಡದ ವಿನ್ಯಾಸವನ್ನು ಸಹ ಪರಿಶೀಲನೆ ಮಾಡಿ ವ್ಯತ್ಯಾಸ ಕಂಡು ಬಂದಲ್ಲಿ ಅದನ್ನು ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ತಿಕರವನ್ನು ಆನಲೈನ್ ಮುಖಾಂತರ ಪೇಮೆಂಟ್ ಮಾಡಲು ಹಾಗೂ ತಾಂತ್ರಿಕ ವಿಭಾಗದ ಕಿರಿಯ ಅಭಿಯಂತರರಿಗೆ ನಗರದಲ್ಲಿ ಅನಧೀಕೃತ ಕಟ್ಟಡಗಳ ನಿರ್ಮಾಣ, ಸಾರ್ವಜನಿಕ ದೂರು ಸಲ್ಲಿಸಲು ಸಹಾಯವಾಣಿಗಾಗಿ ವಾಟ್ಸ್‍ಆಯಪ್ ನಂಬರ್ ಸಿದ್ದಪಡಿಸಲು ಅಗತ್ಯ ಕ್ರಮವಹಿಸಿ. ಜತೆಗೆ ನಗರದಲ್ಲಿ ಸಮರ್ಪಕವಾಗಿ ಬೀದಿ ದೀಪಗಳ ವ್ಯವಸ್ಥೆಯ ಇರುವಂತೆ ನೋಡಿಕೊಳ್ಳಬೇಕು. ನಗರಸಭೆಯ ಆರೋಗ್ಯ ನಿರೀಕ್ಷಕರು ಮನೆ ಕಸ ಸಂಗ್ರಹಣೆಯ ಬಗ್ಗೆ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಶಾಲಾ ಕಾಲೇಜುಗಳಲ್ಲಿ ಐ.ಇ.ಸಿ. ಕಾರ್ಯಕ್ರಮವನ್ನು ಹಮ್ಮಿಕೊಂಡು, ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಬೇಕು ಎಂದರು.
ನಗರದ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ತಯಾರಿಸುವ ಕಾಂಪೆÇೀಸ್ಟ್ ಗೊಬ್ಬರವನ್ನು 1 ಕೆಜಿ., 5 ಕೆಜಿ., ಮತ್ತು 10 ಕೆಜಿ ಪ್ಯಾಕ್ ಮಾಡಿ, ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ನಗರಸಭೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಕೊಪ್ಪಳ ನಗರಸಭೆ ಪೌರಾಯುಕ್ತರಾದ ವೆಂಕಟೇಶ ನಾಗನೂರು ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


