ಉಡುಪಿ: ಕಿದಿಯೂರ್ಸ್ ಎಜುಕೇಶನ್ ಟ್ರಸ್ಟ್ ವತಿಯಿಂದ ಕಿದಿಯೂರ್ಸ್ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಆರ್‌ಜಿಎಫ್ ಗ್ರೂಪ್ ಸಹಭಾಗಿತ್ವದಲ್ಲಿ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಮೂರು ಕೋ.ರೂ.ವರೆಗಿನ ವಿದ್ಯಾರ್ಥಿ ವೇತನ ಘೋಷಿಸಲಾಗಿದೆ.
ವಿದ್ಯಾರ್ಥಿ ವೇತನಕ್ಕೆ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಸಂಬಂಧ ಡಿ.21ರ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಕಿದಿಯೂರು ಹೊಟೇಲ್‌ನ ಶೇಷಶಯನ ಸಭಾಂಣಗಣದಲ್ಲಿ ಆಯ್ಕೆ ಪರೀಕ್ಷೆ ನಡೆಯಲಿದೆ ಎಂದು ಟ್ರಸ್ಟ್ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಹಾಗೂ ಆರ್‌ಜಿಎಫ್ ಗ್ರೂಪ್ ಸಿಇಒ ರವೀಂದ್ರ ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಕಿದಿಯೂರ್ಸ್ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತದೆ. ಶಿಕ್ಷಣ ಜತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ, ವೃತ್ತಿ ಕೌಶಲತೆ ಎಲ್ಲವನ್ನು ಶಾಲಾ ಹಂತದಿಂದಲೇ ಕಲಿಸಿಕೊಡಲಾಗುತ್ತದೆ. ಉತ್ಕೃಷ್ಟ ಶಾಲಾ ಕಟ್ಟಡಕ್ಕಾಗಿ ರಾಜ್ಯಮಟ್ಟದ ಪ್ರಶಸ್ತಿಯೂ ಲಭಿಸಿದೆ ಎಂದರು.
ಭಾರತದ ಅತಿದೊಡ್ಡ ಪ್ರತಿಭಾನ್ವೇಷಣೆ ಸ್ಕಾಲರ್‌ಶಿಪ್ ಟೆಸ್ಟ್ ಇದಾಗಿದೆ. ಡಿ.21 ರಂದು ನಡೆಯುವ ಸ್ಕಾಲರ್‌ಶಿಪ್ ಆಯ್ಕೆ ಪರೀಕ್ಷೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಇದೇ ವೇಳೆ ಮಕ್ಕಳ ಪಾಲಕ, ಪೋಷಕರಿಗೆ ಶೈಕ್ಷಣಿಕ ಅರಿವು ಕಾರ್ಯಕ್ರಮವೂ ಹಮ್ಮಿಕೊಂಡಿದ್ದೇವೆ. ಸಂಪೂರ್ಣ ಮೆರಿಟ್ ಆಧಾರದಲ್ಲೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 1ರಿಂದ 9ನೇ ತರಗತಿಯ ತಲಾ 10 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೋರಿಸುವ ಪ್ರತಿಭೆಯ ಆಧಾರದಲ್ಲಿ ವಿದ್ಯಾರ್ಥಿ ವೇತನದ ಪ್ರಮಾಣ ನಿಗದಿ ಮಾಡಲಿದ್ದೇವೆ ಎಂದರು.
ಸ್ಕೂಲ್ ನಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪಾರ್ಕ್ ಪ್ರೋಗ್ರಾಮ್ ಪರಿಚಯಿಸಿದ್ದೇವೆ. ಇದರಲ್ಲಿ ಪ್ರಿ ಒಲಂಪಿಯಾಡ್ ಫೌಂಡೇಶನ್ ಇಂಟಗ್ರೆಟೆಡ್ ಪಠ್ಯಕ್ರಮ, ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ, ಅಬಾಕಸ್, ವೇದಿಕ್ ಮ್ಯಾಥ್ಸ್, ಕೋಡಿಂಗ್, ರೊಬೊಟಿಕ್ಸ್, ಎಐ ಫೌಂಡೇಶನ್ ತರಗತಿಗಳು ಇರಲಿದೆ. 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಫೌಂಡೇಶನ್ ಕೋಚಿಂಗ್ ಅಡಿಯಲ್ಲಿ ಐಐಟಿ, ಜೆಇಇ, ನೀಟ್, ಸಿವಿಲ್ ಸರ್ವಿಸ್, ಸಿಎ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಆದ್ಯತೆ, ರಾಷ್ಟ್ರೀಯ ಮಟ್ಟದ ಆನ್‌ಲೈನ್ ಆಯಕ್ಸಿಸ್, ಕೌಶಲ ಟ್ರೈನಿಂಗ್ ಇರಲಿದೆ ಎಂದರು.
ಶಿಕ್ಷಕ ಕಿರಣ್ ಕುಮಾರ್, ಆಡಳಿತಾಧಿಕಾರಿ ಹಿರಿಯಣ್ಣ, ಕಿದಿಯೂರು ಸಂಸ್ಥೆಯ ವಿಲಾಸ್, ನಝೀರ್ ಅಹಮ್ಮದ್ ಪತ್ರಿಕಾಗೋಷ್ಠಿಯಲ್ಲಿದ್ದರು.

