ರಾಯಚೂರು ಡಿಸೆಂಬರ್ 19 (ಕರ್ನಾಟಕ ವಾರ್ತೆ): ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಹಾಗೂ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಸಾರ್ವಜನಿಕ ಹಿತದೃಷ್ಟಿಯಿಂದಾಗಿ ನೀಡಿದ ನಿರ್ದೇಶನದ ಮೇರೆಗೆ ರಾಯಚೂರು ವಿಭಾಗದ ಸಹಾಯಕ ಆಯಕ್ತರಾದ ಗಜಾನನ ಬಾಳೆ ಹಾಗೂ ಇನ್ನೀತರ ಅಧಿಕಾರಿಗಳ ನೇತೃತ್ವದಲ್ಲಿ ಡಿ.18ರಂದು ಸಂಜೆ ಹೊತ್ತಿಗೆ ರಾಯಚೂರು ಸಿಟಿಯಲ್ಲಿನ ಕೆಲ ಹೊಟೆಲಗಳು ಮತ್ತು ರೆಸ್ಟೊರೆಂಟಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ರಾಯಚೂರು ಮಹಾನಗರ ಪಾಲಿಕೆಯ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ಶಾವಂತಗೇರಿ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ನಜೀರ್ ಅಹಮ್ಮದ್, ರಾಯಚೂರು ತಾಲೂಕು ತಹಶೀಲ್ದಾರ್ ಸುರೇಶ ವರ್ಮ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಹಿಯುದ್ದಿನ್, ಪಾಲಿಕೆ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ ಮತ್ತು ಪಾಲಿಕೆ ನಿರೀಕ್ಷಣಾಧಿಕಾರಿಗಳು ಮತ್ತು ಇನ್ನೀತರರನ್ನು ಒಳಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಸ್ಟೇಷನ್ ರಸ್ತೆ ಸೇರಿದಂತೆ ನಗರದ ವಿವಿಧ ಹೋಟೆಲ್ ಹಾಗೂ ರೆಸ್ಟೋರಂಟ್‌ಗಳ ಮೇಲೆ ದಾಳಿ ನಡೆಸಿ, ಅಲ್ಲಿ ತಯಾರಿಸಿದ್ಧ ಬೇರೆ ಬೇರೆ ನಮೂನೆಯ ಉಪಹಾರ ಮತ್ತು ಊಟದ ಆಹಾರದ ಗುಣಮಟ್ಟ, ಅಲ್ಲಿನ ಶುಚಿತ್ವ, ಅಡುಗೆ ತಯಾರಕರ ಆರೋಗ್ಯ, ಲೈಸೆನ್ಸ್ ಮತ್ತು ಇನ್ನೀತರ ವಿಷಯಗಳ ಬಗ್ಗೆ ಸಮಗ್ರ ಪರಿಶೀಲಿಸಿ, ದುರವಸ್ಥೆ ಕಂಡು ಬಂದ ಕಡೆಗಳಲ್ಲಿನ ಹೊಟೆಲ್ ಹಾಗೂ ರೆಸ್ಟೊರೆಂಟಗಳ ಮೇಲೆ ದಂಡ ವಿದಿಸಿ, ಸರಿಪಡಿಸಿಕೊಳ್ಳಲು ಎಚ್ಚರಿಕೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಪ್ರಮುಖ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಲ್ಲಿನ ಅಡುಗೆ ಕೋಣೆಗಳಿಗೆ ಪ್ರವೇಶಿಸಿ ಆಹಾರ ಸಿದ್ಧತೆಯ ಪರಿ, ಕುಡಿವ ನೀರು ಸಂಗ್ರಹಕ್ಕೆ ಬಳಸಿದ ತೊಟ್ಟಿ ಮತ್ತು ಅಡುಗೆಗೆ ಬಳಸುವ ಪದಾರ್ಥಗಳನ್ನು ಪರಿಶೀಲಿಸಿದರು.
ಅಡುಗೆಗೆ ಸಂಗ್ರಹಿಸಿದ ದವಸ-ಧಾನ್ಯಗಳ ಗುಣಮಟ್ಟ, ತರಕಾರಿಗಳು, ಖರೀದಿಸಿದ್ದ ಕೆಲ ಪದಾರ್ಥಗಳ ಕಾಲಾವಧಿ ವಿವರ, ಅಡುಗೆ ಎಣ್ಣೆ, ಉಪ್ಪಿನ ಗುಣಮಟ್ಟದ ಪ್ರಮಾಣವನ್ನು ಪರಿಶೀಲಿಸಿದರು.
ಕೆಲ ಹೋಟೆಲ್‌ಗಳಲ್ಲಿ ಹಾಕಿದ್ದ ಉಪಹಾರ ಮತ್ತು ಊಟದ ದರಪಟ್ಟಿಯ ಬಗ್ಗೆ ಸಹ ಪರಿಶೀಲನೆ ಮಾಡಿದರು.
ಈ ವೇಳೆ ರಾಯಚೂರು ವಿಭಾಗದ ಸಹಾಯಕ ಆಯುಕ್ತರು ಮಾತನಾಡಿ, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006ರ ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳು 2011ರ ಸೂಚನೆಗಳನ್ನು ಕಡ್ಡಾಯ ಅನುಸರಿಸಬೇಕು. ಈ ಸುಧಾರಣಾ ಸೂಚನೆಗಳನ್ನು ಅನುಸರಿಸಲು ವಿಫಲವಾದರೆ ಹೊಟೆಲ್ ರೆಸ್ಟೊರೆಂಟಗಳ ಪರವಾನಿಗೆಯನ್ನು ಅಮಾನತುಗೊಳಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *